ಮ್ಯಾಂಚೆಸ್ಟರ್: ಪಾಕಿಸ್ತಾನದಲ್ಲಿ ಜನಿಸಿ ದಕ್ಷಿಣ ಆಫ್ರಿಕಾ ಪರ ಕ್ರಿಕೆಟ್ ಆಡುತ್ತಿರುವ ಇಮ್ರಾನ್ ತಾಹೀರ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲಿದ್ದಾರೆ.
ಇಂದು ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವಾಡುತ್ತಿದ್ದು, ಇದು ಇಮ್ರಾನ್ ತಾಹೀರ್ರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.
2011ರ ವಿಶ್ವಕಪ್ನಲ್ಲಿ ವಿಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ತಾಹೀರ್ ಅದೇ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ್ದರು. 106 ಏಕದಿನ ಪಂದ್ಯಗಳಲ್ಲಿ ಹರಿಣಗಳನ್ನು ಪ್ರತಿನಿಧಿಸಿರುವ ಅವರು 172 ವಿಕೆಟ್ ಕಬಳಿಸಿದ್ದಾರೆ. 45 ರನ್ ನೀಡಿ 7 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ನಾನು ಇಂದು ಕೊನೆಯ ಬಾರಿಗೆ ಏಕದಿನ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳುತ್ತಿರುವೆ. ಈ ವೇಳೆ ನನ್ನ ವೃತ್ತಿ ಜೀವನದ ಅಂತ್ಯದವರೆಗೂ ನನ್ನ ಜೊತೆಯಾಗಿ ನಿಂತ ತಂಡಕ್ಕೆ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ನನ್ನ ಧನ್ಯವಾದ ಅರ್ಪಿಸುತ್ತಿದ್ದೇನೆ. ಅದರಲ್ಲೂ ನನ್ನ ಕ್ರಿಕೆಟ್ ಕನಸನ್ನು ನನಸು ಮಾಡಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ವಿಶೇಷ ಧನ್ಯವಾದ ಅರ್ಪಿಸುತ್ತಿದ್ದೇನೆಂದು ತಾಹೀರ್ ಟ್ವೀಟ್ ಮಾಡಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ತಾಹೀರ್ 10 ವಿಕೆಟ್ ಪಡೆದಿದ್ದಾರೆ. ಎಲ್ಲಾ ವಿಶ್ವಕಪ್ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ದ.ಆಫ್ರಿಕಾ ಎಂಟನೇ ಸ್ಥಾನದಲ್ಲಿದೆ. 8 ಪಂದ್ಯಗಳಲ್ಲಿ 5 ಸೋಲು ಹಾಗೂ ಕೇವಲ 2 ಗೆಲುವು ಮಾತ್ರ ಕಂಡಿರುವ ಆಫ್ರಿಕನ್ನರು ಈ ವಿಶ್ವಕಪ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ.