ಲೀಡ್ಸ್:ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನ್ನಲಾಗುತ್ತಿರುವ ಅತಿಥೇಯ ಇಂಗ್ಲೆಂಡ್ ತಂಡವನ್ನು ಸೋಲಿಸಲು ಲಂಕಾ ತಂಡಕ್ಕೆ ನೆರವಾದ ಲಸಿತ್ ಮಲಿಂಗಾ ವಿಶ್ವಕಪ್ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ.
ಶುಕ್ರವಾರ ಲೀಡ್ಸ್ನಲ್ಲಿ ಕೇವಲ 233 ರನ್ ಟಾರ್ಗೆಟ್ ನೀಡಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು 212 ರನ್ಗಳಿಗೆ ಆಲೌಟ್ ಮಾಡುವ ಮೂಲಕ 20 ರನ್ಗಳಿಂದ ಜಯ ಸಾಧಿಸಿತ್ತು. ಕಡಿಮೆ ಗುರಿ ನೀಡಿದ್ದ ಲಂಕಾ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗಿತ್ತು. ಆದರೆ ಯಾರ್ಕರ್ ಕಿಂಗ್ ಮಲಿಂಗಾ ಇಂಗ್ಲೆಂಡ್ ತಂಡದ ಪ್ರಮುಖ 4 ವಿಕೆಟ್ ಕಬಳಿಸಿ 20 ರನ್ಗಳ ಜಯಕ್ಕೆ ಕಾರಣರಾಗಿದ್ದರು.
ಈ ಪಂದ್ಯಕ್ಕೂ ಮುನ್ನ 25 ಇನ್ನಿಂಗ್ಸ್‌ನಿಂದ 47 ವಿಕೆಟ್ ಪಡೆದಿದ್ದ ಮಲಿಂಗಾ ತಮ್ಮ 28ನೇ ಪಂದ್ಯದಲ್ಲಿ 50ನೇ ವಿಕೆಟ್ ಪಡೆದು ವಿಶ್ವಕಪ್ ಇತಿಹಾಸದಲ್ಲಿ ವೇಗವಾಗಿ 50 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ4ನೇ ಸ್ಥಾನಕ್ಕೇರಿದರು.
ಮಲಿಂಗಾ ಅವರಿಗೂ ಮುನ್ನ ಆಸ್ಟ್ರೇಲಿಯಾದ ಮೆಕ್ಗ್ರಾತ್, ಪಾಕಿಸ್ತಾನದ ವಾಸಿಂ ಅಕ್ರಂ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ವಿಶ್ವಕಪ್ನಲ್ಲಿ 50 ವಿಕೆಟ್ ಪಡೆದಿದ್ದಾರೆ.