ಮುಂಬೈ: 2011ರ ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ವಿಶ್ವಕಪ್‌ಗೆ ಮುತ್ತಿಕ್ಕಿದ ಆ ಕ್ಷಣ ಈಗಲೂ ನನಗೆ ರೋಮಾಂಚನದ ಅನುಭವ ತರಿಸುತ್ತದೆ ಎಂದು ಭಾರತದ ಲೆಜೆಂಡ್ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಎತ್ತಿ ಹಿಡಿದಿತ್ತು. ಬರೋಬ್ಬರಿ 5 ವಿಶ್ವಕಪ್ ಆಡಿದ್ದ ಸಚಿನ್ 6ನೇ ವಿಶ್ವಕಪ್ನಲ್ಲಿ ಚೊಚ್ಚಲ ವಿಶ್ವಕಪ್ ಕನಸನ್ನು ನನಸಾಗಿಸಿಕೊಂಡಿದ್ದರು. ಪಂದ್ಯದ ನಂತರ ಭಾರತದ ಆಟಗಾರರೆಲ್ಲರೂ ವಾಂಖೆಡೆ ಸುತ್ತ ಸಚಿನ್ ಅವರನ್ನು ಹೆಗಲ ಮೇಲೆ ಹೊತ್ತು ನಡೆದಿದ್ದ ಆ ಕ್ಷಣ ಇಂದಿಗೂ ಭಾರತ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಕ್ಷಣ ಆಗಿದೆ.
ಆ ಮದುರ ಕ್ಷಣವನ್ನು "ರಾಷ್ಟ್ರವನ್ನೇ ಹೆಗಲ ಮೇಲೆ ಹೊತ್ತ ಕ್ಷಣ" ಎಂದು ಹೆಸರಿಸಲಾಗಿದ್ದು, ಲೌರೆಸ್ನ 2000 ದಿಂದ 2020ರ ವರೆಗಿನ ಕ್ರೀಡಾ ಕ್ಷೇತ್ರದ ಅತ್ಯುತ್ತಮ ಕ್ಷಣ ಪ್ರಶಸ್ತಿಗಾಗಿ ನಾಮ ನಿರ್ದೇಶನವಾಗಿದೆ.
ಈ ಪ್ರಶಸ್ತಿ ಸಚಿನ್ ಬರಲು ಮತ ನೀಡುವಂತೆ ಭಾರತ ತಂಡದ ನಾಯಕ ಕೊಹ್ಲಿ, ಯುವರಾಜ್ ಸಿಂಗ್ ಭಾರತೀಯ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ತೆಂಡೂಲ್ಕರ್, ಯುವಿ, ಈ ಕ್ಷಣ ಭಾರತ ತಂಡ ಹಾಗೂ ವಿಶ್ವದಾದ್ಯಂತ ಇರುವ ಭಾರತೀಯರದ್ದಾಗಿದೆ. 2011 ವಿಶ್ವಕಪ್ ಗೆಲುವು ನನಗೆ ನಿನ್ನೆ ನಡೆದಂತೆ ಭಾಸವಾಗುತ್ತಿದೆ. ಆ ರಾತ್ರಿಯ ಕ್ಷಣವನ್ನು ನೆನೆದಾಗ ಈಗಲೂ ರೋಮಾಂಚನವಾಗುತ್ತದೆ ಎಂದಿದ್ದಾರೆ.
ಲೌರೆಸ್ ಸ್ಪೋ ರ್ಟ್ಸ್ ಸಂಸ್ಥೆಯು 2000-2020ರ ನಡುವಿನ ಕ್ರೀಡಾ ಕ್ಷಣ ಪ್ರಶಸ್ತಿಗಾಗಿ 20 ಸನ್ನಿವೇಶಗಳನ್ನು ಆಯ್ಕೆ ಮಾಡಿತ್ತು. ಇದೀಗ ಆ ಸಂಖ್ಯೆ 5ಕ್ಕೆ ಬಂದು ನಿಂತಿದೆ. ಫೆ.16ರವರೆಗೆ ಅಭಿಮಾನಿಗಳು ಪ್ರಶಸ್ತಿಗೆ ವೋಟ್ ಮಾಡುವ ಅವಕಾಶ ಹೊಂದಿದ್ದು, ಫೆ. 17 ರಂದು ಬರ್ಲಿನ್ನಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಲಿದೆ.