ದುಬೈ: ಯುಎಇಯಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್ ಕ್ರೀಡಾ ಇತಿಹಾಸದಲ್ಲೇ ಹೊಸ ದಾಖಲೆಗೆ ಪಾತ್ರವಾಗಿದೆ. ಸೆಪ್ಟೆಂಬರ್ 19 ರಂದು ಮುಂಬೈ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆದ ಮೊದಲ ಉದ್ಘಾಟನಾ ಪಂದ್ಯ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಎನಿಸಿಕೊಂಡಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಪಿಎಲ್ನ ಆರಂಭಿಕ ಪಂದ್ಯ ಹೊಸ ದಾಖಲೆ ಬರೆದಿದೆ ಎಂದು ಟ್ವಿಟ್ಟರ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
"ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಿಎಆರ್‌ಸಿ)ಯ ಪ್ರಕಾರ, ಸುಮಾರು 20 ಕೋಟಿ ಜನರು ಲೀಗ್ನ ಮೊದಲ ಪಂದ್ಯವನ್ನು ವೀಕ್ಷಿಸಲು ಟ್ಯೂನ್ ಮಾಡಿದ್ದಾರೆ. ಇದು ವಿಶ್ವದಲ್ಲೇ ಆರಂಭಿಕ ದಿನದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯವಾಗಿದೆ. ವಿಶ್ವದ ಯಾವುದೇ ದೇಶದ, ಯಾವುದೇ ಕ್ರೀಡಾ ಲೀಗ್ ಆರಂಭದ ದಿನದಲ್ಲಿ ಇಷ್ಟು ವೀಕ್ಷಣೆ ದಾಖಲಾಗಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಈ ಬಗ್ಗೆ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದೆ. " ಡ್ರೀಮ್11 ಐಪಿಎಲ್ ಒಂದು ಕನಸಿನ ಆರಂಭ ಪಡೆದಿದೆ. ನಾವು ಟಿವಿ ಮತ್ತು ಡಿಜಿಟಲ್ ವೀವರ್ಶಿಪ್ನಲ್ಲಿ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಬರೆದಿದ್ದೇವೆ. ಇದಕ್ಕೆ ಕಾರಣವಾದ ಭಾರತ ಮತ್ತು ಇಡೀ ವಿಶ್ವಕ್ಕೆ ಧನ್ಯವಾದಗಳು. ಮುಂಬೈ ಮತ್ತು ಚೆನ್ನೈ ಪಂದ್ಯದ ವೀಕ್ಷಣೆ 200 ಮಿಲಿಯನ್ " ಎಂದು ತಮ್ಮ ಅಧಿಕೃತ ಟ್ವಿಟ್ಟರ್ನಲ್ಲಿ ಬರೆದುಕೊಂಡಿದೆ.