ಇಂದೋರ್:ಪ್ರವಾಸಿ ಬಾಂಗ್ಲಾದೇಶದ 150 ರನ್ನಿಗೆ ಪ್ರತ್ಯುತ್ತರವಾಗಿ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 2ನೇ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 493 ರನ್ ಕಲೆಹಾಕಿದೆ.
ಮಯಾಂಕ್ ಅಗರ್ವಾಲ್ ದ್ವಿಶತಕ, ಪೂಜಾರ, ರಹಾನೆ ಹಾಗೂ ಜಡೇಜಾ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಭಾರತದ ತಂಡ 2ನೇ ದಿನದ ಮುಕ್ತಾಯಕ್ಕೆ 343 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಮೈದಾನದಲ್ಲಿ ಮಯಾಂಕ್ ಮಾಯೆ! ಸೆಹ್ವಾಗ್ ಮಾದರಿ ಸಿಡಿಲಬ್ಬರದ ದ್ವಿಶತಕ!
ಮೊದಲ ದಿನದಂತ್ಯಕ್ಕೆ 37 ರನ್ ಗಳಿಸಿ ಅಜೇಯರಾಗುಳಿದಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಇಂದಿನ ಆಟದಲ್ಲಿ ಜೀವನಶ್ರೇಷ್ಠ 243 ರನ್ ಸಿಡಿಸಿ ಔಟಾದರು. ಮಯಾಂಕ್ ಆಟಕ್ಕೆ ಸಾಥ್ ನೀಡಿದ ಚೇತೇಶ್ವರ ಪೂಜಾರ(54), ಅಜಿಂಕ್ಯ ರಹಾನೆ(86) ಹಾಗೂ ರವೀಂದ್ರ ಜಡೇಜಾ(60) ರನ್ಗಳ ನೆರವು ನೀಡಿದರು. ನಾಯಕ ಕೊಹ್ಲಿ ಶೂನ್ಯ ಸುತ್ತಿದ್ದರೂ ಭಾರತಕ್ಕೆ ಯಾವುದೇ ಪರಿಣಾಮ ಬೀರಲಿಲ್ಲ.
ಸದ್ಯ ರವೀಂದ್ರ ಜಡೇಜಾ 60 ಹಾಗೂ ಉಮೇಶ್ ಯಾದವ್ 25 ರನ್ ಗಳಿಸಿ 3ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಬಾಂಗ್ಲಾ ಪರ ಅಬು ಜಯೇದ್ 4 ವಿಕೆಟ್ ಕಿತ್ತು ಉತ್ತಮ ಪ್ರದರ್ಶನ ನೀಡಿದ್ದಾರೆ. ಉಳಿದಂತೆ ಮೆಹದಿ ಹಸನ್ ಹಾಗೂ ಇಬಾದತ್ ಹೊಸೈನ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡಿದ್ದಾರೆ.