ದೆಹಲಿ:ಹೆಸರು ಮರುನಾಮಕರಣವಾದ ಬಳಿಕ ಮೊದಲ ಪಂದ್ಯ ಆಯೋಜಿಸುತ್ತಿರುವ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಭಾರತ-ಬಾಂಗ್ಲಾದೇಶ ನಡುವೆ ಇಂದು ಮೊದಲ ಟಿ20 ಪಂದ್ಯ ನಡೆಯಲಿದ್ದು,ಮೇಲ್ನೋಟಕ್ಕೆ ಟೀಂ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅನುಪಸ್ಥಿತಿ ಬಾಂಗ್ಲಾದೇಶಕ್ಕೆ ಬಹುವಾಗಿ ಕಾಡಲಿದ್ದು, ಇತ್ತ ಕೊಹ್ಲಿ ಇಲ್ಲದ ತಂಡವನ್ನು ಹಿಟ್ಮ್ಯಾನ್ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.
ಮೂರು ಟಿ20 ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತದಲ್ಲಿ ಆಡಲು ಆಗಮಿಸಿರುವ ಬಾಂಗ್ಲಾದೇಶ ಇಂದಿನಿಂದ ತನ್ನ ಪ್ರವಾಸ ಆರಂಭಿಸಲಿದೆ. ಶಕೀಬ್ ಅನುಪಸ್ಥಿತಿ ಒಂದೆಡೆಯಾದರೆ, ವೈಯಕ್ತಿಕ ಕಾರಣಗಳಿಂದ ಅನುಭವಿ ಆಟಗಾರ ತಮಿಮ್ ಇಕ್ಬಾಲ್ ಭಾರತ ಪ್ರವಾಸ ಕೈಗೊಂಡಿಲ್ಲ. ಇವೆಲ್ಲದರ ನಡುವೆಯೂ ಮಹ್ಮದುಲ್ಲ ಪಡೆ ಗೆಲ್ಲುವ ಉತ್ಸಾಹದಲ್ಲಿದೆ.
ಈ ಪಂದ್ಯ ಅಂತಾರಾಷ್ಟ್ರೀಯ ಟಿ20ಯ 1000ನೇ ಪಂದ್ಯವಾಗಿದ್ದು, ಈ ನಿಟ್ಟಿನಲ್ಲಿ ವಿಶೇಷತೆ ಪಡೆದಿದೆ. ಹೀಗಾಗಿ ಉಭಯ ತಂಡಗಳು ಗೆದ್ದು ಪಂದ್ಯವನ್ನು ಸ್ಮರಣೀಯವಾಗಿಸಲು ಸಜ್ಜಾಗಿದ್ದಾರೆ. ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರತದ ಐದನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ ಒಂಭತ್ತನೇ ಸ್ಥಾನದಲ್ಲಿದೆ.
ವಿಷಗಾಳಿಯದ್ದೇ ದೊಡ್ಡ ಚಿಂತೆ:
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇನ್ನಿಲ್ಲದಂತೆ ನೆಲಕಚ್ಚಿದ್ದು, ಇದು ಕ್ರಿಕೆಟ್ ಮೇಲೂ ನೇರ ಪರಿಣಾಮ ಬೇರಿದೆ. ಮುಖಕ್ಕೆ ಮಾಸ್ಕ್ ಧರಿಸಿ ಬಾಂಗ್ಲಾ ಕ್ರಿಕೆಟಿಗರು ನೆಟ್ ಪ್ರಾಕ್ಟೀಸ್ ನಡೆಸಿದ್ದಾರೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಈ ವೇಳೆ ವಿಷಗಾಳಿ ತೊಂದರೆ ನೀಡುವ ಸಾಧ್ಯತೆ ತೀರಾ ಕಮ್ಮಿ ಎಂದು ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಸತತ ಸೋಲಿನ ಸುಳಿಯಲ್ಲಿ ಬಾಂಗ್ಲಾ ಟೈಗರ್ಸ್:
ಟೀಂ ಇಂಡಿಯಾ ವಿರುದ್ಧ ಈವರೆಗೆ 8 ಬಾರಿ ಮುಖಾಮುಖಿಯಾಗಿದ್ದು ಅಷ್ಟೂ ಪಂದ್ಯದಲ್ಲಿ ಸೋತು ನಿರಾಶೆ ಮೂಡಿಸಿದೆ. ಆದರೆ ಈ ಬಾರಿಯಾದರೂ ಈ ಸೋಲಿನ ಸುಳಿಯಿಂದ ಹೊರಬರುತ್ತಾ ಎನ್ನುವ ಕುತೂಹಲ ಮೂಡಿದೆ. ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧ ಸತತ 12 ಟಿ20 ಪಂದ್ಯ ಸೋತಿದ್ದು ದಾಖಲೆಯಾಗಿ ಉಳಿದಿದೆ. ಈ ಸರಣಿಯಲ್ಲಿ ಬಾಂಗ್ಲಾ ವೈಟ್ವಾಶ್ ಆದಲ್ಲಿ ಜಿಂಬಾಬ್ವೆ ಸನಿಹ ಬರಲಿದೆ.