ಮುಂಬೈ: ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಟಿ20 ವಿಶ್ವಕಪ್‌ನಲ್ಲಿ 6 ಬಾಲಿಗೆ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿ ಇಂದಿಗೆ ಬರೋಬ್ಬರಿ 12 ವರ್ಷಗಳು ಸಂದಿವೆ. ಆದರೆ ಯುವಿಯ ಆ ಅಬ್ಬರದ ಬ್ಯಾಟಿಂಗ್ ಮಾತ್ರ ಇನ್ನೂ ಭಾರತೀಯರ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ.
2007ರ ಸೆಪ್ಟಂಬರ್ 19 ಭಾರತೀಯರು ಎಂದೂ ಮರೆಯದ ದಿನ. ಇಂದಿಗೆ 12 ವರ್ಷಗಳ ಹಿಂದೆ ಯುವರಾಜ್ ಸಿಂಗ್ ಅವರು ಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ನ ವೇಗಿ ಸ್ಟುವರ್ಟ್ ಬ್ರಾಡ್ ಅವರ ಬೌಲಿಂಗ್ನಲ್ಲಿ ಓವರ್ನ ಆರು ಎಸೆತಗಳಲ್ಲಿ ಸತತ ಆರು ಸಿಕ್ಸರ್ ಸಿಡಿಸಿ ವಿಶ್ವ ದಾಖಲೆಗೆ ಪಾತ್ರರಾಗಿದ್ದರು.
ಕೆಣಕಿದ್ದು ಫ್ಲಿಂಟಾಫ್, ದಂಡಿಸಿಕೊಂಡಿದ್ದು ಬ್ರಾಡ್!
16.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ್ದ ಯುವರಾಜ್ ಸಿಂಗ್ರನ್ನು ಇಂಗ್ಲೆಂಡ್ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಸುಖಸುಮ್ಮನೆ ಕೆಣಕಿದ್ದರು. ಇದರಿಂದ ತೀವ್ರ ಕೋಪಗೊಂಡ ಯುವಿ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿ ಕೋಪ ತೀರಿಸಿಕೊಂಡಿದ್ದರು. ಕೇವಲ 12 ಎಸೆತಗಳಲ್ಲೇ ಅರ್ಧಶತಕ ಬಾರಿಸುವ ಮೂಲಕ ವಿಶ್ವ ದಾಖಲೆ ಬರೆದರು. ಆದರೆ ಫ್ಲಿಂಟಾಫ್ ವಿರುದ್ಧದ ಕೋಪವನ್ನು ತೀರಿಸಿಕೊಂಡಿದ್ದು ಮಾತ್ರ ಯುವ ವೇಗಿ ಬ್ರಾಡ್ ಮೇಲೆ.
16 ಎಸೆತಗಳನ್ನು ಎದುರಿಸಿದ್ದ ಯುವಿ ಮೂರು ಬೌಂಡರಿ ಹಾಗೂ ಏಳು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 58 ರನ್ ಗಳಿಸಿದ್ದರು. 7 ಸಿಕ್ಸರ್ಗಳಲ್ಲಿ 19 ನೇ ಓವರ್ ಎಸೆದ ಬ್ರಾಡ್ನ ಎಲ್ಲಾ 6 ಎಸೆತಗಳು ಬೌಂಡರಿ ಗೆರೆ ದಾಟಿದ್ದವು. ಯುವರಾಜ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 218 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇವರಿಗೂ ಮೊದಲು ಸೆಹ್ವಾಗ್ 68 , ಗಂಭೀರ್ 58 ರನ್ ಗಳಿಸಿದ್ದರು. ಈ ಪಂದ್ಯವನ್ನು ಭಾರತ 18 ರನ್ಗಳಿಂದ ಗೆದ್ದುಕೊಂಡಿತ್ತು.