ಲಂಡನ್: 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ಗೆ ಫ್ಲ್ಯಾಗ್ ಫುಟ್ಬಾಲ್, ಬೇಸ್ಬಾಲ್ ಮತ್ತು ಸಾಫ್ಟ್ಬಾಲ್ ಜೊತೆಗೆ ಕ್ರಿಕೆಟ್ ಅನ್ನು ಸೇರಿಸಲು ನಿರ್ಧರಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಅಕ್ಟೋಬರ್ 15 ರಂದು ಮುಂಬೈನಲ್ಲಿ ನಡೆಯಲಿರುವ 141ನೇ ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯ ಅಧಿವೇಶನದಲ್ಲಿ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು 'ದಿ ಗಾರ್ಡಿಯನ್' ವರದಿ ಮಾಡಿದೆ.
"LA28 ಒಲಿಂಪಿಕ್ಸ್ಗೆ ಕ್ರಿಕೆಟ್ ಅನ್ನು ಸೇರಿಸಲು ಶಿಫಾರಸು ಮಾಡಿರುವುದು ನಮಗೆ ಸಂತೋಷ ತಂದಿದೆ. ಇದು ಅಂತಿಮ ನಿರ್ಧಾರವಲ್ಲವಾದರೂ, ಒಂದು ಶತಮಾನಕ್ಕೂ ಹೆಚ್ಚು ಸಮಯದ ನಂತರ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ನೋಡುವ ಅವಕಾಶ ದೊರೆಯಲಿದ್ದು, ಇದು ಬಹಳ ಮಹತ್ವದ ಹೆಗ್ಗುರುತಾಗಿದೆ" ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಸಂತಸ ವ್ಯಕ್ತಪಡಿಸಿದರು.
ಅಲ್ಲದೇ, "ಕಳೆದ ಎರಡು ವರ್ಷಗಳಲ್ಲಿ ಹೊಸ ಕ್ರೀಡಾ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನೀಡಿದ ಬೆಂಬಲಕ್ಕಾಗಿ ನಾನು LA28ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಮುಂದಿನ ವಾರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತದಲ್ಲಿ ನಡೆಯಲಿರುವ ಐಒಸಿ ಅಧಿವೇಶನದಲ್ಲಿ ಘೋಷಿಸಲಿರುವ ಅಂತಿಮ ನಿರ್ಧಾರಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ:ಸ್ಯಾಂಟ್ನರ್ ದಾಳಿಗೆ ತತ್ತರಿಸಿದ ನೆದರ್ಲೆಂಡ್; ಕಿವೀಸ್ಗೆ 99 ರನ್ಗಳ ಭರ್ಜರಿ ಗೆಲುವು
1998 ರಲ್ಲಿ ಕೌಲಾಲಂಪುರದಲ್ಲಿ ಮತ್ತು 2022 ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಎರಡು ಬಾರಿ ಕ್ರಿಕೆಟ್ ಕಾಣಿಸಿಕೊಂಡಿತ್ತು. ಆದರೆ, 1900 ರಿಂದ ನಡೆದ ಯಾವುದೇ ಒಲಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕಂಡು ಬಂದಿಲ್ಲ. 2028ರ ಬೇಸಿಗೆ ಕ್ರೀಡಾಕೂಟಕ್ಕೆ ಲ್ಯಾಕ್ರೋಸ್ ಮತ್ತು ಸ್ಕ್ವ್ಯಾಷ್ ಅನ್ನು ಹೆಚ್ಚುವರಿ ಕ್ರೀಡೆಗಳಾಗಿ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
128 ವರ್ಷಗಳ ನಂತರ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆ: 1900ರಲ್ಲಿ ಪ್ಯಾರೀಸ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಆಡಲಾಗಿತ್ತು. ಪ್ಯಾರೀಸ್ನಲ್ಲಿ ನಡೆದ ಈ ಏಕೈಕ ಪಂದ್ಯದಲ್ಲಿ ಇಂಗ್ಲೆಂಡ್, ಫ್ರಾನ್ಸ್ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತ್ತು. ಒಲಿಂಪಿಕ್ಸ್ಗೆ ಕ್ರಿಕೆಟ್ ಪ್ರವೇಶವು ಕ್ರೀಡೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಭಾರತವು ಕ್ರೀಡೆಗಳ ಅತಿ ದೊಡ್ಡ ಮಾರುಕಟ್ಟೆಯಾಗಿದೆ. 2028ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಗೊಂಡ ನಂತರ ದೇಶದಲ್ಲಿ IOC ಪ್ರಸಾರ ಒಪ್ಪಂದದ ಮೌಲ್ಯವು ಗಣನೀಯವಾಗಿ ಹೆಚ್ಚಾಗುತ್ತದೆ. 2024ರ ಒಲಿಂಪಿಕ್ಸ್ಗಾಗಿ 15.6 ಮಿಲಿಯನ್ ಪೌಂಡ್ಗಳಿಂದ 2028ರ ಆವೃತ್ತಿಯಲ್ಲಿ ಕ್ರಿಕೆಟ್ ಕಾಣಿಸಿಕೊಂಡರೆ, ಭಾರತದಲ್ಲಿ ಪ್ರಸಾರ ಒಪ್ಪಂದವು 150 ಮಿಲಿಯನ್ ಪೌಂಡ್ಗಳನ್ನು ಪಡೆಯಬಹುದು ಎಂದು ವರದಿಯಾಗಿದೆ.
ಮಹಿಳಾ ಕ್ರಿಕೆಟ್ ಕಳೆದ ವರ್ಷ ಕಾಮನ್ವೆಲ್ತ್ ಗೇಮ್ಸ್ಗೆ ಪದಾರ್ಪಣೆ ಮಾಡಿತು. ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ಆಡಲಾಯಿತು. ಇಲ್ಲಿ ಭಾರತ ಸ್ಪರ್ಧೆ ಮುನ್ನಡೆಸಿತು.
ಇದನ್ನೂ ಓದಿ:ಏಷ್ಯನ್ ಗೇಮ್ಸ್ ಪದಕ ವಿಜೇತರೊಂದಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಸಂವಾದ