ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 113 ರನ್ಗಳ ಜಯ ಸಾಧಿಸಿದ ಭಾರತ ತಂಡವನ್ನು ಕ್ರಿಕೆಟ್ ಜಗತ್ತಿನ ದಿಗ್ಗಜರು ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ಭಾರತೀಯ ಬೌಲಿಂಗ್ ದಾಳಿಯನ್ನ ಪ್ರಶಂಸಿಸಿದ್ದಾರೆ.
ಗಬ್ಬಾ ಮತ್ತು ಲಾರ್ಡ್ಸ್ನಲ್ಲಿನ ಅವಿಸ್ಮರಣೀಯ ಗೆಲುವಿನ ನಂತರ ಭಾರತ 2021ರಲ್ಲಿ ದಕ್ಷಿಣ ಆಫ್ರಿಕಾದ ಭದ್ರಕೋಟೆ ಸೂಪರ್ ಸ್ಪೋರ್ಟ್ ಪಾರ್ಕ್ನಲ್ಲಿ ಗುರುವಾರ 113 ರನ್ಗಳ ಅಮೋಘ ಜಯ ಸಾಧಿಸಿತು. ಬುಮ್ರಾ, ಶಮಿ ಸೇರಿದಂತೆ ಭಾರತದ ವಿಶ್ವದರ್ಜೆಯ ವೇಗಿಗಳ ತಂಡ ಹರಿಣಗಳ 18 ವಿಕೆಟ್ ಪಡೆಯುವ ಮೂಲಕ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ಗೆಲುವು ಸಾಧಿಸಿದ ಮೊದಲ ಏಷ್ಯನ್ ತಂಡ ಎನಿಸಿಕೊಂಡಿತು.
ದಕ್ಷಿಣ ಆಫ್ರಿಕಾದಲ್ಲಿ ಮೊದಲ ಸರಣಿ ಗೆಲುವಿನ ಕನಸಿನಲ್ಲಿರುವ ಭಾರತ ತಂಡ ತನ್ನ ಮೊದಲನೇ ಟೆಸ್ಟ್ ಪಂದ್ಯದಲ್ಲೇ ವಿಜಯ ಸಾಧಿಸಿರುವುದಕ್ಕೆ ಕ್ರಿಕೆಟ್ ಕುಟುಂಬ ಅಭಿನಂದನೆ ಸಲ್ಲಿಸಿದೆ. ವಿಶ್ವದ ಯಾವುದೇ ಟೆಸ್ಟ್ ಪಂದ್ಯದಲ್ಲಿ 20 ವಿಕೆಟ್ಗಳನ್ನು ಪಡೆಯುವಂತ ಬೌಲಿಂಗ್ ಘಟಕದಿಂದ ಅದ್ಭುತ ಪ್ರದರ್ಶನ. ಮನವೊಲಿಸುವ ಈ ಜಯಕ್ಕಾಗಿ ಭಾರತ ತಂಡಕ್ಕೆ ಅಭಿನಂದನೆಗಳು ಎಂದು ಭಾರತ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಕೊಹ್ಲಿಪಡೆಗೆ ಶುಭ ಹಾರೈಸಿದ್ದಾರೆ.
ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಬ್ರಿಸ್ಬೇನ್, ಲಾರ್ಡ್ಸ್ಮ ಮತ್ತು ಸೆಂಚುರಿಯನ್... ಏಷ್ಯನ್ ತಂಡವಾಗಿ ಸೆಂಚುರಿಯನ್ನಲ್ಲಿ ಮೊದಲ ಗೆಲುವು ಸಾಧಿಸಿದ್ದಕ್ಕೆ ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.