ಮೊಹಾಲಿ: 100ನೇ ಟೆಸ್ಟ್ ಮೈಲಿಗಲ್ಲಿನಲ್ಲಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹಾಲಿ ನಾಯಕ ರೋಹಿತ್ ಶರ್ಮಾ, ನಮ್ಮ ಟೆಸ್ಟ್ ತಂಡ ಇಂದು ಅತ್ಯುತ್ತಮ ಸ್ಥಾನದಲ್ಲಿದೆ ಎಂದರೆ, ಇದರ ಯಶಸ್ಸಿನ ಶ್ರೇಯ ವಿರಾಟ್ ಕೊಹ್ಲಿಗೆ ಸಲ್ಲಬೇಕು ಎಂದರು.
"ಒಂದು ತಂಡವಾಗಿ ನಾವಿಂದು ಅತ್ಯುತ್ತಮ ಸ್ಥಾನದಲ್ಲಿದ್ದೇವೆ. ಈ ಮಾದರಿಯಲ್ಲಿ ನಾವು ಶ್ರೇಷ್ಠ ಸ್ಥಾನ ತಲುಪಿರುವುದರ ಸಂಪೂರ್ಣ ಕೊಡುಗೆ ಕೊಹ್ಲಿಗೆ ಸಲ್ಲುತ್ತದೆ. ಅವರು ಟೆಸ್ಟ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಏನು ಮಾಡಿದ್ದಾರೋ ಅದು ನೋಡಲು ಅದ್ಭುತವಾಗಿದೆ. ಅವರು ಬಿಟ್ಟು ಹೋಗಿರುವ ಸ್ಥಳದಿಂದ ನಾನು (ನಾಯಕತ್ವ) ಅದನ್ನು ತೆಗೆದುಕೊಳ್ಳಬೇಕಾಗಿದೆ. ಸೂಕ್ತವಾದ ಆಟಗಾರರೊಂದಿಗೆ ಸರಿಯಾದ ಕೆಲಸವನ್ನು ತೆಗಿಸುವ ಜವಾಬ್ದಾರಿ ನನ್ನ ಮೇಲಿದೆ" ಎಂದು ರೋಹಿತ್ ಶರ್ಮಾ ಟೆಸ್ಟ್ ನಾಯಕನಾಗಿ ಮೊದಲ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
100ನೇ ಟೆಸ್ಟ್ ಅದ್ಭುತ ಪಯಣ:ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಾಗಿನಿಂದ ಕೊಹ್ಲಿಗೆ ಇದೊಂದು ಸುದೀರ್ಘ ಪಯಣವಾಗಿದೆ. ಈಗ ಅವರು 100ನೇ ಟೆಸ್ಟ್ ಪಂದ್ಯವನ್ನಾಡಲು ಹೊರಟಿದ್ದು ಅದ್ಭುತ ಸಾಧನೆ. ಈ ಸ್ವರೂಪದ ಕ್ರಿಕೆಟ್ನಲ್ಲಿ ಅವರು ಅಮೋಘ ಸಾಧನೆ ಮಾಡಿದ್ದಾರೆ. ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲು ಹಲವು ಮಹತ್ವದ ಬದಲಾವಣೆ ಮಾಡಿದ್ದಾರೆ ಎಂದು ಹಿಟ್ಮ್ಯಾನ್ ಶ್ಲಾಘಿಸಿದರು.
ಪಂದ್ಯವನ್ನು ವಿಶೇಷವಾಗಿಸಲು ಬಯಸುತ್ತೇವೆ:ಕೊಹ್ಲಿ ಪಾಲಿನ 100ನೇ ಟೆಸ್ಟ್ ಪಂದ್ಯವನ್ನು ನಾವು ವಿಶೇಷವಾಗಿಸಲು ಬಯಸುತ್ತೇವೆ. ನಾವೆಲ್ಲರೂ ಅದಕ್ಕಾಗಿ ಸಿದ್ಧರಿದ್ದೇವೆ ಮತ್ತು ಐದು ದಿನಗಳ ಕ್ರಿಕೆಟ್ ಅತ್ಯುತ್ತಮವಾಗಿರಲಿದೆ. ವಿರಾಟ್ ಆಟವನ್ನು ನೋಡಲು ಪ್ರೇಕ್ಷಕರು ಬರುತ್ತಿದ್ದಾರೆ ಮತ್ತು ಅದು ಕೂಡ ಒಂದು ದೊಡ್ಡ ವಿಷಯ ಎಂದು ಟೀಮ್ ಇಂಡಿಯಾ ನಾಯಕ ಹೇಳಿದರು.