ನವದೆಹಲಿ:ಭಾರತೀಯ ಕ್ರಿಕೆಟ್ ಮೇಲೆ ದಿನಕ್ಕೊಂದು ಆಪಾದನೆ ಕೇಳಿ ಬರುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕ್ರಿಕೆಟ್ ತಂಡದ ಆಟಗಾರರ ಫಿಟ್ನೆಸ್, ವೈಮನಸ್ಸಿನ ಬಗ್ಗೆ ಕುಟುಕು ಕಾರ್ಯಾಚರಣೆಯೊಂದರಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಚೇತನ್ ಶರ್ಮಾ ಮಾತನಾಡಿದ್ದರು. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಮಾಜಿ ಅಧಿಕಾರಿಯೊಬ್ಬರು ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ಮಾಜಿ ಮುಖ್ಯಸ್ಥ ನೀರಜ್ ಕುಮಾರ್ ತಾವು ಅಧಿಕಾರದಲ್ಲಿದ್ದಾಗ ಕೇಳಿಬಂದ ಆರೋಪಗಳನ್ನು ತಮ್ಮ 'ಎ ಕಾಪ್ ಇನ್ ಕ್ರಿಕೆಟ್' ಪುಸ್ತಕದಲ್ಲಿ ಬರೆದಿದ್ದಾರೆ. ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸಿಂಗ್‌ಗಿಂತಲೂ ದೊಡ್ಡ ಭ್ರಷ್ಟಾಚಾರಗಳು ನಡೆಯುತ್ತದೆ ಎಂಬ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.
'ಮಹಿಳೆಯರಿಗೆ ಲೈಂಗಿಕ ಕಿರುಕುಳ':ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳಧ ಮಾಜಿ ಅಧ್ಯಕ್ಷರಾಗಿದ್ದ ನೀರಜ್ ಕುಮಾರ್ ತಿಳಿಸುವಂತೆ, ಯುವ ಮಹಿಳಾ ಕ್ರಿಕೆಟಿಗರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಟೂರ್ನಿಗಳಲ್ಲಿ ಆಡಲು ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಹೇಳಿ ಆಮಿಷ ತೋರಿಸುತ್ತಾರೆ. ತಮ್ಮ ಅಧಿಕಾರವಧಿಯಲ್ಲಿ ಇಂತಹ ಹಲವು ದೂರುಗಳು ಬಂದಿದ್ದವು ಎಂದು ಉಲ್ಲೇಖಿಸಿದ್ದಾರೆ.
ಐಪಿಎಲ್ ಮತ್ತು ರಣಜಿಯಲ್ಲಿ ಸ್ಥಾನ ನೀಡುವ ಸಲುವಾಗಿ ಯುವ ಕ್ರಿಕೆಟಿಗರು ಮತ್ತು ಪೋಷಕರಿಂದ ಲಕ್ಷಾಂತರ ರೂಪಾಯಿ ಕೇಳುತ್ತಿದ್ದಾರೆ ಎಂದು ಆರೋಪಿಸಿ ಬಂದ ದೂರುಗಳನ್ನು ನಾನು ಪಡೆದಿದ್ದೇನೆ. ಬಿಸಿಸಿಐ ಐಪಿಎಲ್ ಸೇರಿದಂತೆ ಅನೇಕ ಟೂರ್ನಿಗಳಿಂದ ಬಂದ ಹಣದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಪಾಲು ನೀಡಲಾಗುತ್ತದೆ. ಆದರೆ, ಅಲ್ಲಿನ ಅಧಿಕಾರಿಗಳು ಕ್ರಿಕೆಟಿಗರನ್ನು ಶೋಷಣೆಗೊಳಪಡಿಸುತ್ತಾರೆ. ಕ್ರಿಕೆಟಿಗರಿಂದ ಹಣ ಪಡೆದುಕೊಳ್ಳುತ್ತಾರೆ. ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.