ದುಬೈ(ಯುಎಇ):ಏಷ್ಯಾ ಕಪ್ನ ನಿನ್ನೆಯ ಪಂದ್ಯದಲ್ಲಿ ಅಬ್ಬರಿಸಿರುವ ಹಾರ್ದಿಕ್ ಪಾಂಡ್ಯ ಇದೀಗ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಪಾಲಿನ ಹೀರೋ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಜವಾಬ್ದಾರಿಯತ ಆಟವಾಡಿರುವ ಈ ಪ್ಲೇಯರ್ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿ ಅದರಲ್ಲಿ ಯಶಸ್ಸು ಕಂಡರು. ಇದರ ಬೆನ್ನಲ್ಲೇ ಮಹತ್ವದ ಟ್ವೀಟ್ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಟ್ವೀಟ್ ಏನು?: ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲೇ ಗಾಯಗೊಂಡು ಕ್ರಿಕೆಟ್ನಿಂದ ಹೊರಬಿದ್ದಿದ್ದ ಪಾಂಡ್ಯ, ಇದೀಗ ಅದೇ ತಂಡದ ವಿರುದ್ಧ ಅಬ್ಬರಿಸಿ ಗೆಲುವಿನ ಸಂಭ್ರಮ ಮಾಡ್ತಿರುವ ಚಿತ್ರ ಟ್ವೀಟ್ ಇದಾಗಿದೆ. ಈ ಫೋಟೋಗೆ ಯಾವುದೇ 'ಹಿನ್ನಡೆಗಿಂತ ಪುನರಾಗಮನ ದೊಡ್ಡದು' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಬಿದ್ದಲ್ಲೇ ಬೆಳೆದು ನಿಲ್ಲಬೇಕು ಎಂಬ ಸಂದೇಶ ರವಾನಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಜೀವನ ಹೂವಿನ ಹಾಸಿಗೆ ಆಗಿಲ್ಲ. ಅನೇಕ ಏಳು-ಬೀಳು ಕಂಡಿರುವ ಅವರು, ಕಳೆದ ಕೆಲ ವರ್ಷಗಳ ಹಿಂದೆ ತಂಡದಿಂದ ಸಂಪೂರ್ಣವಾಗಿ ಸೈಡ್ಲೈನ್ ಆಗಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದಿನ ಕಥೆಯಿದು. ಏಷ್ಯಾಕಪ್ನಲ್ಲಿ ಬೆನ್ನುನೋವಿನ ಸಮಸ್ಯೆಗೊಳಗಾಗಿದ್ದ ಪಾಂಡ್ಯ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ನಡೆಯಲೂ ಸಾಧ್ಯವಾಗದ ಅವರನ್ನು ಸ್ಟ್ರೆಚರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಸ್ಟ್ರೇಚರ್ ಮೇಲೆ ಹೊರಹೋಗಿದ್ದ ಪಾಂಡ್ಯ: ನಾಲ್ಕು ವರ್ಷಗಳ ಹಿಂದೆ ಪಾಕ್ ವಿರುದ್ಧ ನಡೆದ ಏಷ್ಯಾಕಪ್ನಲ್ಲಿ ನಡೆದ ಘಟನೆ ಇದಾಗಿದೆ. 18ನೇ ಓವರ್ ಎಸೆಯಲು ಬಂದಿದ್ದ ಪಾಂಡ್ಯ, ಬೆನ್ನು ನೋವಿನ ಕಾರಣ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಸ್ಟ್ರೇಚರ್ ಮೇಲೆ ಮಲಗಿಸಿ ಹೊರಗಡೆ ತೆಗೆದುಕೊಂಡು ಹೋಗಲಾಗಿತ್ತು. ಇದಾದ ಬಳಿಕ ಇಂಗ್ಲೆಂಡ್ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿ, ಕೆಲ ತಿಂಗಳ ಕಾಲ ಕ್ರಿಕೆಟ್ನಿಂದ ದೂರ ಉಳಿಯುತ್ತಾರೆ. 2019ರ ಏಕದಿನ ಕ್ರಿಕೆಟ್ಗೆ ಪಾಂಡ್ಯ ಕಮ್ಬ್ಯಾಕ್ ಮಾಡಿದ್ರೂ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ಅವರಿಂದ ಮೂಡಿ ಬರುವುದಿಲ್ಲ. ಇದಾದ ಬಳಿಕ ಅವರು ಅನೇಕ ನೋವು ಅನುಭವಿಸಿದ್ದು, ಟೀಕಾಕಾರರಿಂದಲೂ ಆಕ್ರೋಶಕ್ಕೊಳಗಾಗಿದ್ದರು.
ಇದನ್ನೂ ಓದಿ:Asia Cup 2022: ಹಾರ್ದಿಕ್ ಆಟಕ್ಕೆ ತಲೆಬಾಗಿ ಮೆಚ್ಚುಗೆ ವ್ಯಕ್ತಪಡಿಸಿದ ದಿನೇಶ್ ಕಾರ್ತಿಕ್.. ವಿಡಿಯೋ ನೋಡಿ
ಕಳೆದ ವರ್ಷ ದುಬೈನಲ್ಲಿ ನಡೆದ ವಿಶ್ವಕಪ್ನಲ್ಲಿ ಅವರು ಬೌಲಿಂಗ್ ಮಾಡದ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮತ್ತೊಮ್ಮೆ ಕ್ರಿಕೆಟ್ನಿಂದ ಹೊರಗುಳಿಯುತ್ತಾರೆ. ತದನಂತರ ಐಪಿಎಲ್ ಮೂಲಕ ಗುಜರಾತ್ ತಂಡದ ನಾಯಕತ್ವ ವಹಿಸಿಕೊಂಡು ಕ್ರಿಕೆಟ್ಗೆ ರೀ ಎಂಟ್ರಿ ಮಾಡ್ತಾರೆ. ಐಪಿಎಲ್ನಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಅಬ್ಬರಿಸಿ ತಂಡವನ್ನು ಚಾಂಪಿಯನ್ಗೇರಿಸಿ, ಟೀಕಾಕಾರರ ಬಾಯಿ ಮುಚ್ಚಿಸುತ್ತಾರೆ. ಅಷ್ಟೇ ಅಲ್ಲ, ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಇದೀಗ ಪಾಕಿಸ್ತಾನ್ ವಿರುದ್ಧ ಅಬ್ಬರಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.