ದುಬೈ: ವೆಸ್ಟ್ ಇಂಡೀಸ್ ಲೆಜೆಂಡರಿ ಬ್ಯಾಟರ್ ಕ್ರಿಸ್ ಗೇಲ್ ಯುಎಇಯಲ್ಲಿ ಬಯೋಬಬಲ್ ಬಿಡಲು ಕಾರಣ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಸರಿಯಾಗಿ ನಡೆಸಿಕೊಂಡಿಲ್ಲ. ಹಾಗಾಗಿ ಅವರು ಟಿ20 ವಿಶ್ವಕಪ್ಗೂ ಮುನ್ನ ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಲು ಹೊರ ಹೋಗಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಹಾಗೂ ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಕೆರಿಬಿಯನ್ ಬ್ಯಾಟ್ಸ್ಮನ್ ಗೇಲ್ ಬಯೋಬಬಲ್ ಆಯಾಸದಿಂದಾಗಿ ಪಂಜಾಬ್ ಕಿಂಗ್ಸ್ ಹೋಟೆಲ್ ಮತ್ತು ಐಪಿಎಲ್ ಬಯೋಬಬಲ್ ಅನ್ನು ತೊರೆದಿದ್ದಾರೆ. ಅವರು ಈ ಪರಿಸ್ಥಿತಿಯಲ್ಲಿ ಕಳೆದು ಕೆಲವು ತಿಂಗಳಿನಿಂದ ಫ್ರಾಂಚೈಸಿ ಮತ್ತು ಅಂತಾರಾಷ್ಟ್ರೀಯ ಲೀಗ್ಗಳಲ್ಲಿ ಆಡಿ ದಣಿದಿದ್ದಾರೆ. ಹಾಗಾಗಿ ಅವರು ಪಂಜಾಬ್ ತಂಡದ ಉಳಿದ ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂದು ಸೆಪ್ಟೆಂಬರ್ 30ರಂದು ಫ್ರಾಂಚೈಸಿ ಹೇಳಿಕೆ ಬಿಡುಗಡೆ ಮಾಡಿತ್ತು.
ಶುಕ್ರವಾರ ಈ ಕುರಿತು ಸ್ಟಾರ್ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಪೀಟರ್ಸನ್," ಗೇಲ್ರನ್ನು ಅವರಿದ್ದ ಪರಿಸರದಲ್ಲಿ ಸರಿಯಾಗಿ ನೋಡಿಕೊಂಡಿಲ್ಲ. ತಮ್ಮನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ ಎಂಬ ಭಾವನೆ ಅವರಲ್ಲಿ ಉಂಟಾಗಿದೆ. ಅವರ ಜನ್ಮದಿನದಂದು ಪಂದ್ಯದಲ್ಲಿ ಆಡುವ ಅವಕಾಶ ನೀಡದೇ ಕಡೆಗಣಿಸಲಾಯಿತು. ಆತನಿಗೆ 42 ವರ್ಷ, ಆತ ಸಂತೋಷದಲ್ಲಿಲ್ಲ ಎಂದರೆ, ತನಗೇನು ಮಾಡಬೇಕೆಂದು ತೋಚುತ್ತದೆಯೋ ಅದನ್ನು ಮಾಡಲು ಬಿಡಬೇಕು" ಎಂದು ಹೇಳಿದ್ದಾರೆ.