ಬೆಂಗಳೂರು: ಏಕದಿನ ವಿಶ್ವಕಪ್ ಸರಣಿ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇವೆ. ಈ ಬಾರಿಯ ವಿಶ್ವಕಪ್‌ನಲ್ಲಿ ಐದು ಪಂದ್ಯಗಳಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದೆ. ಅಕ್ಟೋಬರ್ 20ರಂದು ಆಸ್ಟ್ರೇಲಿಯಾ - ಪಾಕಿಸ್ತಾನ, ಅಕ್ಟೋಬರ್ 26ರಂದು ಇಂಗ್ಲೆಂಡ್ - ಶ್ರೀಲಂಕಾ, ನವೆಂಬರ್ 4ರಂದು ನ್ಯೂಜಿಲೆಂಡ್ - ಪಾಕಿಸ್ತಾನ, ನವೆಂಬರ್ 9ರಂದು ನ್ಯೂಜಿಲೆಂಡ್ - ಶ್ರೀಲಂಕಾ ಹಾಗೂ ನವೆಂಬರ್ 12ರಂದು ಭಾರತ - ನೆದರ್ಲೆಂಡ್ಸ್ ನಡುವಿನ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಈ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಕೆಲ ಪ್ರಮುಖ ಸೌಲಭ್ಯಗಳನ್ನ ಮೇಲ್ದರ್ಜೆಗೇರಿಸಲಾಗಿದೆ.
ನಲವತ್ತು ಸಾವಿರ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಚಿನ್ನಸ್ವಾಮಿ ಕ್ರೀಡಾಂಗಣ ಮಳೆ ಬಾಧಿತ ಸಂದರ್ಭಗಳನ್ನ ಎದುರಿಸಲು 'ಸಬ್ ಏರ್' ವ್ಯವಸ್ಥೆ, ವಿದ್ಯುತ್ಗಾಗಿ ಮೇಲ್ಛಾವಣಿಗಳಲ್ಲಿ ಸೋಲಾರ್ ಪ್ಯಾನೆಲ್ ವ್ಯವಸ್ಥೆ, ಮಳೆ ನೀರು ಮರುಬಳಕೆಯಂಥಹ ವ್ಯವಸ್ಥೆಗಳನ್ನು ಹೊಂದಿದ ದೇಶದ ಮೊದಲ ಕ್ರೀಡಾಂಗಣವಾಗಿದೆ. ಈ ಬಾರಿಯ ವಿಶ್ವಕಪ್ ಸರಣಿಗೆ ಅಂತಿಮ ಕ್ರೀಡಾಂಗಣಗಳ ಪಟ್ಟಿ ಪ್ರಕಟವಾದ ಬಳಿಕ ಐಸಿಸಿಯ ಅಧಿಕಾರಿಗಳ ತಂಡ ಬೆಂಗಳೂರಿಗೆ ಭೇಟಿ ನೀಡಿದ್ದು ಕೆಲ ಸಲಹೆ ಸೂಚನೆಗಳನ್ನು ನೀಡಿದೆ. ಅದರಂತೆ ಕ್ರೀಡಾಂಗಣದ ಕೆಲ ಸ್ಟ್ಯಾಂಡ್ಗಳ ಮೇಲ್ಛಾವಣಿ ಬದಲಾವಣೆ, ಆಸನಗಳ ಬದಲಾವಣೆ, ಮಾಧ್ಯಮ ಕೊಠಡಿಯ ಊಟದ ಕೊಣೆಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗಿದೆ.
ಡ್ರೆಸ್ಸಿಂಗ್ ರೂಮ್:ಆಟಗಾರರ ಡ್ರೆಸ್ಸಿಂಗ್ ರೂಮ್ ಪ್ರಮುಖ ಮಾರ್ಪಾಡು ಹೊಂದಿದ್ದು, ನೆಲಹಾಸು ಸಂಪೂರ್ಣವಾಗಿ ಬದಲಿಸಲಾಗಿದೆ. ಅಲ್ಲದೇ ಡ್ರೆಸ್ಸಿಂಗ್ ರೂಮ್ ಶೌಚಾಲಯಗಳನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲಾಗಿದೆ.
ಹಾಸ್ಪಿಟಾಲಿಟಿ ಬಾಕ್ಸ್:ಕ್ರೀಡಾಂಗಣವು P2, P, P-ಟೆರೇಸ್, ಹಾಗೂ ಡೈಮಂಡ್ ಎಂಬ ನಾಲ್ಕು ಬಾಕ್ಸ್ಗಳನ್ನು ಹೊಂದಿದ್ದು, ಅಭಿಮಾನಿಗಳು ಊಟ, ಐಷಾರಾಮಿ ಸೌಲಭ್ಯದೊಂದಿಗೆ ಪಂದ್ಯಗಳನ್ನ ವೀಕ್ಷಿಸಬಹುದು. ಇನ್ನು ಆಟಗಾರರ ಡ್ರೆಸ್ಸಿಂಗ್ ರೂಮ್ ಪಕ್ಕದಲ್ಲಿರುವ ಡೈಮಂಡ್ ಬಾಕ್ಸ್ ವಿಶೇಷ ಅತಿಥಿಗಳಿಗಾಗಿ ಮೀಸಲಿರಲಿದ್ದು ರಾಜ್ಯದ ದಿಗ್ಗಜ ಕ್ರಿಕೆಟಿಗರೊಂದಿಗೆ ಕುಳಿತು ಕ್ರಿಕೆಟ್ ವೀಕ್ಷಿಸುವ ಅವಕಾಶವಿರಲಿದೆ.
ಆಟಗಾರರ ಅಭ್ಯಾಸ:ಚಿನ್ನಸ್ವಾಮಿ ಕ್ರೀಡಾಂಗಣವು ಆಟಗಾರರ ನೆಟ್ ಸೆಷನ್ಸ್ ಬಳಕೆಗಾಗಿ ಐದು ಪಿಚ್ ಹೊಂದಿದೆ. ಇದಲ್ಲದೇ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್.ಸಿಎ) ಗ್ರೌಂಡ್ ಸಹ ಆಟಗಾರರ ಅಭ್ಯಾಸಕ್ಕೆ ಬಳಕೆಯಾಗಲಿದೆ.
ಪಿಚ್:ಮೈದಾನದ ಮೂರು ಪಿಚ್ಗಳನ್ನು ಅಂತರಾಷ್ಟ್ರೀಯ ಪಂದ್ಯಗಳ ಬಳಕೆಗಾಗಿ ಐಸಿಸಿ ಗುರುತಿಸಿದೆ. ಆ ಪೈಕಿ ಕೆಂಪು ಮಣ್ಣಿನ ಪಿಚ್ ಹೆಚ್ಚು ಬಳಕೆಯಾಗುತ್ತಿದೆ. ಅಲ್ಲದೆ ನಾಲ್ಕನೇ ಪಿಚ್ ಸ್ಟ್ಯಾಂಡ್ ಬೈ ಎಂದು ಗುರುತಿಸಲ್ಪಟ್ಟಿದೆ.