ಹೋವ್ (ಇಂಗ್ಲೆಂಡ್): ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಬ್ಯಾಟರ್ ಚೇತೇಶ್ವರ ಪೂಜಾರ ಮತ್ತೊಮ್ಮೆ 2024ರ ಕೌಂಟಿ ಕ್ರಿಕೆಟ್ ಋತುವಿನಲ್ಲಿ ಆಡುವುದಾಗಿ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಕ್ಲಬ್ ಸಸೆಕ್ಸ್ ತಂಡಕ್ಕೆ ಒಪ್ಪಿಗೆ ನೀಡಿದ್ದಾರೆ. ಅನುಭವಿ ಬ್ಯಾಟರ್ ಪೂಜಾರ ಅವರನ್ನು ಜನವರಿಯನ್ನು ಭಾರತ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಟೆಸ್ಟ್ಗೂ ಆಯ್ಕೆ ಮಾಡಿಲ್ಲ. ಹೀಗಾಗಿ ದೇಶೀಯ ಕ್ರಿಕೆಟ್ ಮತ್ತು ವಿದೇಶದ ಕೌಂಟಿ ಆಡಲು ನಿರ್ಧರಿಸಿದಂತಿದೆ.
ದಕ್ಷಿಣ ಆಫ್ರಿಕಾದಲ್ಲಿ ಭಾರತ ಆಡಲಿರುವ ಎರಡು ಟೆಸ್ಟ್ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದಾಗ 100 ಮ್ಯಾಚ್ಗಳ ಅನುಭವ ಇರುವ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಅವರನ್ನು ಕೈಬಿಡಲಾಯಿತು. ಇಂಗ್ಲೆಂಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಈ ಇಬ್ಬರು ಹಿರಿಯ ಆಟಗಾರರು ವೈಟ್ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ನಂತರ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಇವರನ್ನು ಕೈಬಿಟ್ಟು ಯುವ ಆಟಗಾರರಿಗೆ ಮಣೆ ಹಾಕಲಾಗಿತ್ತು. ಹಾಗೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಮತ್ತು ರುತುರಾಜ್ ಗಾಯಕ್ವಾಡ್ ಅವರಿಗೆ ಸ್ಥಾನವನ್ನು ಮಾಡಿಕೊಡಲಾಗಿದೆ.
ಮತ್ತೆ ಸಸೆಕ್ಸ್ ಸೇರಿದ ಚೇತೇಶ್ವರ:2022ರಲ್ಲಿ ಮೊದಲ ಬಾರಿಗೆ ಸಹಿ ಮಾಡಿದ ಸಸೆಕ್ಸ್ ಕ್ಲಬ್‌ನೊಂದಿಗೆ ಇದು ಅವರ ಮೂರನೇ ನೇರ ಋತುವಾಗಿದೆ. 2024 ರ ಋತುವಿಗೆ ಸಂಬಂಧಿಸಿದಂತೆ, ಅವರು ಕೌಂಟಿ ಚಾಂಪಿಯನ್‌ಶಿಪ್‌ನ ಆರಂಭಿಕ ಏಳು ಪಂದ್ಯಗಳಿಗೆ ಪುಜಾರ ಲಭ್ಯವಿರುತ್ತಾರೆ. ಸಸೆಕ್ಸ್ ತಂಡಕ್ಕೆ ಸೇರುವ ಬಗ್ಗೆ ಸಹಿ ಮಾಡಿದ ನಂತರ ಪೂಜಾರ, "ಕಳೆದ ಎರಡು ಸೀಸನ್‌ಗಳಲ್ಲಿ ನಾನು ಹೋವ್‌ನಲ್ಲಿ ನನ್ನ ಸಮಯವನ್ನು ಆನಂದಿಸಿದೆ ಮತ್ತು ಸಸೆಕ್ಸ್ ತಂಡಕ್ಕೆ ಮತ್ತೆ ಮರಳುತ್ತಿರುವುದು ಸಂತೋಷ ತಂದಿದೆ. ನಾನು ತಂಡವನ್ನು ಸೇರಲು ಮತ್ತು ಅದರ ಯಶಸ್ಸಿಗೆ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದರು.