ಡರ್ಬಿ:ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕೌಂಟಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ಕಳಪೆ ಫಾರ್ಮ್ನಿಂದ ಭಾರತ ತಂಡದಿಂದ ಹೊರಬಿದ್ದಿರುವ ಪೂಜಾರ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡುವುದಕ್ಕೆ ಸಾಕಷ್ಟು ಹರಸಹಾಸ ಮಾಡುತ್ತಿದ್ದಾರೆ. ರಣಜಿ ಟ್ರೋಫಿಯಲ್ಲಿ ಆಡಿದ 2 ಪಂದ್ಯಗಳಲ್ಲಿ 2 ಅರ್ಧಶತಕ ಸಿಡಿಸಿದ್ದ ಪೂಜಾರ ಇದೀಗ ಕೌಂಟಿ ಕ್ರಿಕೆಟ್ನಲ್ಲಿ ಸಸೆಕ್ಸ್ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡರ್ಬಿಶೈರ್ 505 ರನ್ಗಳಿಸಿದ ಡಿಕ್ಲೇರ್ ಘೋಷಿಸಿಕೊಂಡಿತ್ತು. ಈ ಮೊತ್ತವನ್ನು ಬೆನ್ನಟಿದ ಸಸೆಕ್ಸ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 174 ರನ್ಗಳಿಗೆ ಆಲೌಟ್ ಆಗಿತ್ತು. ಪೂಜಾರ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 6 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು.
ಆದರೆ ಫಾಲೋ ಆನ್ಗೆ ತುತ್ತಾಗಿ 2ನೇ ಇನ್ನಿಂಗ್ಸ್ ಆರಂಭಿಸಿದ ಸಸೆಕ್ಸ್ ತಕ್ಕ ಪ್ರತ್ಯುತ್ತರ ನೀಡಿದೆ. ತಂಡದ ಮೊತ್ತ 145ಕ್ಕೆ 2 ವಿಕೆಟ್ ಕಳೆದುಕೊಂಡಿದ್ದಾಗ ಬ್ಯಾಟಿಂಗ್ಗೆ ಆಗಮಿಸಿದ ಪೂಜಾರ 238 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ ತಮ್ಮ 51ನೇ ಪ್ರಥಮ ದರ್ಜೆ ಶತಕ ಪೂರೈಸಿದರು. ಇದು ಅವರ 4ನೇ ಕೌಂಟಿ ಚಾಂಪಿಯನ್ಶಿಪ್ ಶತಕವಾದರೆ, ಸಸೆಕ್ಸ್ ಪರ ಮೊದಲ ಶತಕವಾಗಿದೆ.
ಶತಕದ ನಂತರವೂ ಬ್ಯಾಟಿಂಗ್ ಮುಂದುವರಿಸಿರುವ ಪೂಜಾರ ನಾಯಕ ಟಾಮ್ ಹೇನ್ಸ್ ಜೊತೆಗೂಡಿ 309 ರನ್ಗಳ ಬೃಹತ್ ಜೊತೆಯಾಟ ನಡೆಸಿ ಕ್ರೀಸ್ನಲ್ಲಿದ್ದಾರೆ. ಟೀ ವಿರಾಮಕ್ಕೂ ಮುನ್ನ ಪೂಜಾರ 336 ಎಸೆತಗಳಲ್ಲಿ 18 ಬೌಂಡರಿ ಸಹಿತ 159 ರನ್ ಮತ್ತು ಹೇನ್ಸ್ 472 ಎಸೆತಳಲ್ಲಿ 21 ಬೌಂಡರಿಗಳ ನೆರವಿನಿದ 233 ರನ್ಗಳಿಸಿದ್ದಾರೆ. ಇನ್ನು 31 ಓವರ್ಗಳ ಆಟ ಬಾಕಿಯಿದ್ದು, ಈ ಪಂದ್ಯದ ಡ್ರಾನಲ್ಲಿ ಅಂತ್ಯವಾಗಲಿದೆ.
ಇದನ್ನೂ ಓದಿ:0 W 0 W W W! 20ನೇ ಓವರ್ನಲ್ಲಿ ಒಂದೂ ರನ್ ನೀಡದೆ 4 ವಿಕೆಟ್ ಕಿತ್ತ ಉಮ್ರಾನ್ ಮಲಿಕ್