ಇಂಗ್ಲೆಂಡ್: ಆಂಗ್ಲರ ನೆಲದಲ್ಲಿ ತಮ್ಮ ಅದ್ಭುತ ಲಯವನ್ನು ಕಾಯ್ದುಕೊಂಡಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಇದೀಗ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದ್ದಾರೆ. ಕೌಂಟಿ ಕ್ರಿಕೆಟ್‌ನ ರಾಯಲ್ ಲಂಡನ್ ಒನ್-ಡೇ ಕಪ್ ಟೂರ್ನಿಯಲ್ಲಿ ಸಸೆಕ್ಸ್ ತಂಡವನ್ನು ಮುನ್ನಡೆಸುತ್ತಿರುವ ಅವರು, ಭಾನುವಾರ ನಡೆದ ಪಂದ್ಯದಲ್ಲಿ ಕೇವಲ 131 ಎಸೆತಗಳಲ್ಲಿ ಭರ್ಜರಿ 176 ರನ್ ಸಿಡಿಸಿದ್ದಾರೆ.
ತಂಡದ ನಾಯಕ ಟಾಮ್ ಹೈನ್ಸ್ ಅನುಪಸ್ಥಿತಿಯಲ್ಲಿ ಸಸೆಕ್ಸ್ ತಂಡವನ್ನ ಮುನ್ನಡೆಸುತ್ತಿರುವ ಚೇತೇಶ್ವರ ಪೂಜಾರ, ತಂಡದ ಸ್ಕೋರ್ 3.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 9 ರನ್ ಕಲೆಹಾಕಿತ್ತು. ಈ ವೇಳೆ ಅವರು ಕ್ರೀಸ್‌ಗಿಳಿದರು. ಸರ್ರೆ ತಂಡ ನೀಡಿದ ಆರಂಭಿಕ ಆಘಾತದಿಂದ ತಂಡಕ್ಕೆ ನೆರವಾದ ಅವರು 3ನೇ ವಿಕೆಟ್‌ಗೆ ಟಾಮ್ ಕ್ಲಾರ್ಕ್ ಜೊತೆಗೂಡಿ ಭರ್ಜರಿ ರನ್ ಗಳಿಸಿದರು.
ಟಾಮ್ ಜೊತೆಗೆ 205ರನ್‌ಗಳ ಅಮೋಘ ಜೊತೆಯಾಟವಾಡಿದ ಪೂಜಾರ 103 ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಶತಕ ದಾಖಲಿಸಿದರು. ಉತ್ತಮ ಸಾಥ್ ನೀಡಿದ್ದ ಟಾಮ್ 104 ರನ್‌ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕವೂ ಅವರು ಭರ್ಜರಿ ಆಟ ಮುಂದುವರಿಸಿದರು.