ನವದೆಹಲಿ: ಖಾಸಗಿ ಸುದ್ದಿವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದ್ದ ಭಾರತ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಕಳುಹಿಸಿದ್ದು, ಅದನ್ನು ಅವರು ಅಂಗೀಕರಿಸಿದ್ದಾರೆ. ಖಾಸಗಿ ಮಾಧ್ಯಮ ನಡೆಸಿದ್ದ ರಹಸ್ಯ ಕಾರ್ಯಾಚರಣೆಯಲ್ಲಿ ಕ್ರಿಕೆಟಿಗರು ಮತ್ತು ಬಿಸಿಸಿಐ ಬಗ್ಗೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದ್ದವು. ಇದು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಉಂಟು ಮಾಡಿತ್ತು. ಇದರಿಂದಾಗಿ ಆಯ್ಕೆ ಸಮಿತಿಗೆ ಮರು ಆಯ್ಕೆಯಾಗಿದ್ದ ಚೇತನ್ ಶರ್ಮಾ ಭವಿಷ್ಯವೂ ಡೋಲಾಯಮಾನವಾಗಿದೆ.
ಭಾರತ ತಂಡದ ಆಟಗಾರರ ಮಧ್ಯೆ ಮನಸ್ತಾಪ, ಅವರ ದೈಹಿಕ ಸಾಮರ್ಥ್ಯ, ಫಿಟ್ ಇಲ್ಲದಿದ್ದರೂ ಹೇಗೆ ಆಯ್ಕೆಯಾಗುತ್ತಾರೆ. ತಂಡದಲ್ಲಿನ ಬಣಗಳು ಸೇರಿದಂತೆ ವಿವಿಧ ಮಾಹಿತಿ ಸ್ಟಿಂಗ್ ಆಪರೇಷನ್ ಮೂಲಕ ಹೊರಬಿದ್ದಿತ್ತು. ಆಟಗಾರರು ಫಿಟ್ನೆಸ್ಗಾಗಿ ಬೇರೆ ಮಾರ್ಗ ಹಿಡಿಯುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕ್ರೀಡಾಪಟುಗಳಿಗೆ ಫಿಟ್ನೆಸ್ ಬಹಳ ಮುಖ್ಯ. ಅದನ್ನು ಕಾಪಾಡಿಕೊಳ್ಳಲು ಮಾಡುವ ಕಸರತ್ತು ಒಂದೆರಡಲ್ಲ. ಆದರೆ, ಕ್ರಿಕೆಟ್ ಆಟಗಾರರು ಉದ್ದೀಪನ ಮದ್ದು ಹಾಕಿಕೊಳ್ಳುವ ಮೂಲಕ ಫಿಟ್ನೆಸ್ ಪಾಸ್ ಆಗಿ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಇದು ಗೊತ್ತಿದ್ದರೂ ಯಾರೂ ಏನೂ ಮಾಡುತ್ತಿಲ್ಲ ಎಂದಿರುವುದು ಸ್ಟಿಂಗ್ ಕಾರ್ಯಾಚರಣೆಯಲ್ಲಿ ಸೆರೆಯಾಗಿತ್ತು.
ಭಾರತದ ಮುಂಚೂಣಿ ವೇಗಿ ಜಸ್ಪ್ರೀತ್ ಬೂಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದು ಹಲವು ತಿಂಗಳಿಂದ ಕ್ರಿಕೆಟ್ನಿಂದ ದೂರವಿದ್ದಾರೆ. ಈಗ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಸರಣಿ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ವೈಮನಸ್ಸು ಇರುವುದರ ಬಗ್ಗೆ ಶರ್ಮಾ ಹೇಳಿರುವುದು ವಿಡಿಯೋದಲ್ಲಿದೆ.