ಮೀರತ್( ಉತ್ತರಪ್ರದೇಶ):ನಿನ್ನೆ ದುಬೈನಲ್ಲಿ ನಡೆದ ಐಪಿಎಲ್ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಗಮನ ಸೆಳೆದ ಯುವ ಬ್ಯಾಟರ್ ಎಂದರೆ ಅದು ಸಮೀರ್ ರಿಜ್ವಿ. ಮೀರತ್ ಮೂಲದ 20 ವರ್ಷದ ಯುವ ಬ್ಯಾಟರ್ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 8.40 ಕೋಟಿ ರೂ.ಗೆ ಖರೀದಿಸುವ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ. ಬಲಗೈ ಬ್ಯಾಟರ್ ಆದ ರಿಜ್ವಿ ದೇಶೀಯ ಕ್ರಿಕೆಟ್ನಲ್ಲೂ ವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇದೀಗ ಸಿಎಸ್ಕೆ ಪಾಲಾದ ಬಗ್ಗೆ ರಿಜ್ವಿ ಈಟಿವಿ ಭಾರತದೊಂದಿಗೆ ಸಂತಸ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಸಮೀರ್ ರಿಜ್ವಿ ಈಟಿವಿ ಭಾರತ್ ಜೊತೆ ಮಾತನಾಡಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವುದು ನನಗೆ ಅತೀವ ಸಂತೋಷವನ್ನು ನೀಡುತ್ತಿದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ಅವರ ಜೊತೆ ಆಡುವುದು ನನ್ನ ದೊಡ್ಡ ಸಾಧನೆ ಆಗಿದೆ. ಅಲ್ಲದೇ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ತುಂಬಾ ಕೌಶಲ್ಯಗಳು ಕಲಿತುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಇನ್ನು ಸಮೀರ್ನ ತಾಯಿ ರುಖ್ಯಾನ್ ಮಾತನಾಡಿ, ತನ್ನ ಮಗನಿಗೆ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಒಲವು ಇತ್ತು. ಚಿಕ್ಕ ಹುಡುಗನಾಗಿದ್ದನಿಂದಲೂ ಆತನಿಗೆ ಕ್ರಿಕೆಟ್ ಹುಚ್ಚಿತ್ತು. ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ ಆಗಿದ್ದಾನೆ. ತಮ್ಮ ಮಗ ಐಪಿಎಲ್‌ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಉತ್ತಮ ಪ್ರದರ್ಶನ ನೀಡಲಿದ್ದಾನೆ ಎಂಬ ಸಂಪೂರ್ಣ ಭರವಸೆ ಇದೆ. ಮುಂದೆ ಕೂಡ ಆತ ಭಾರತ ತಂಡಕ್ಕೆ ಆಯ್ಕೆಯಾಗಿ ದೇಶಕ್ಕಾಗಿ ಆಡಬೇಕು ಎಂದು ಹೇಳಿದರು
ಕ್ರಿಕೆಟಿಗನ ತಂದೆ ಮಾತನಾಡಿ, ಬಾಲ್ಯದಲ್ಲಿ ಸಮೀರ್ ಶಾಲೆಯ ಬದಲು ಕ್ರಿಕೆಟ್ ಮೈದಾನಕ್ಕೆ ಹೋಗುತ್ತಿದ್ದ. ಮೊದಲಿಗೆ ಆತ ಓದಿ ಒಳ್ಳೆಯ ಹುದ್ದೆಗೆ ಸೇರಬೇಕು ಎಂದುಕೊಂಡಿದ್ದೆ. ಆದರೆ ಆತ ಓದಿನ ಕಡೆ ಗಮನ ಹರಿಸಲೇ ಇಲ್ಲ. ಬಾಲ್ಯದಲ್ಲಿ ಓದಿಲ್ಲ ಎಂಬ ಕಾರಣಕ್ಕೆ ನನ್ನಿಂದ ಮಗ ಸಾಕಷ್ಟು ಪೆಟ್ಟುಗಳನ್ನು ತಿಂದಿದ್ದಾನೆ. ಸಮೀರ್ಗೆ ಮೊದಲಿನಿಂದಲೂ ಕ್ರಿಕೆಟ್ ಬಗ್ಗೆ ಹೆಚ್ಚಿನ ಇತ್ತು. ಇದನ್ನು ಗಮನಿಸಿದ ಸಮೀರ್ನ ಚಿಕ್ಕಪ್ಪ ತನ್ವೀರ್, ಆತನಿಗೆ ಕ್ರಿಕೆಟ್‌ಗೆ ತರಬೇತಿಗೆ ಸೇರಿಸಿದ್ದರು.