ಪೋರ್ಟ್ ಆಫ್ ಸ್ಪೇನ್ : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕ್ರಿಕೆಟ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತನ್ನ ಆಟ ಮುಂದುವರೆಸಿದೆ. ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್‌ಗೆ 365 ರನ್ಗಳ ಗುರಿ ನೀಡಿದೆ. ಸವಾಲಿನ ಮೊತ್ತವನ್ನು ಬೆನ್ನತ್ತಿರುವ ವೆಸ್ಟ್ ಇಂಡೀಸ್ ನಾಲ್ಕನೇ ದಿನದಂತ್ಯಕ್ಕೆ (ಭಾನುವಾರ) 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದ್ದು, 289 ರನ್ಗಳ ಹಿನ್ನಡೆಯಲ್ಲಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ರನ್ ಗಳಿಕೆ ಮಾಡಿದರು. ಜೈಸ್ವಾಲ್ 38 ರನ್ ಗಳಿಸಿ ಜೋಮೆಲ್ ವ್ಯಾರಿಕನ್ಗೆ ವಿಕೆಟ್ ಒಪ್ಪಿಸಿದರೆ, ರೋಹಿತ್ ಶರ್ಮಾ ಅರ್ಧ ಶತಕ (57) ರನ್ ಗಳಿಸಿ ಶನನ್ ಗ್ಯಾಬ್ರಿಯಲ್ ಬೌಲಿಂಗ್ ದಾಳಿಗೆ ಬಲಿಯಾದರು. ಬಳಿಕ ಬಂದ ಶುಭ್ಮನ್ ಗಿಲ್ (29) ,ಇಶನ್ ಕಿಶನ್ (52) ರನ್ ಗಳಿಸಿ ಔಟಾಗದೇ ಉಳಿದರು. ಈ ವೇಳೆ ಮಳೆ ಬಂದು, ಪಂದ್ಯ ಸ್ಥಗಿತಗೊಂಡಿತ್ತು. ಇದಾದ ನಂತರ ಕೇವಲ ಮೂರು ಓವರ್ಗಳನ್ನು ಆಡಿದ ಭಾರತವು 2 ವಿಕೆಟ್ ನಷ್ಟಕ್ಕೆ 181ರನ್ ಗಳಿಸಿ ಡಿಕ್ಲೇರ್ ಮಾಡಿತು.
ಭಾರತ ನೀಡಿದ 365 ರನ್ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ಗೆ ಆರಂಭಿಕ ಆಘಾತ ಎದುರಾಯಿತು. ನಾಯಕ ಕ್ರೇಗ್ ಬ್ರಾಥ್‌ವೈಟ್ 28 ರನ್ ಗಳಿಸಿ ರವಿಚಂದ್ರನ್ ಅಶ್ವಿನ್ಗೆ ವಿಕೆಟ್ ಒಪ್ಪಿಸಿದರೆ, ಬಳಿಕ ಬಂದ ಕ್ರೆಕ್ ಮೆಕ್ಕೆನ್ಜೀ ಖಾತೆ ತೆರೆಯದೇ ಅಶ್ವಿನ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ನಾಲ್ಕನೇ ದಿನದಂತ್ಯಕ್ಕೆ ಟಾಗೆನರೈನ್ ಚಂದ್ರಪಾಲ್ (24) ಮತ್ತು ಜೆರ್ಮೈನ್ ಬ್ಲಾಕ್‌ವುಡ್ (20) ಬ್ಯಾಟಿಂಗ್ ಕಾಯ್ದಕೊಂಡಿದ್ದಾರೆ. ವೆಸ್ಟ್ ಇಂಡೀಸ್ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದ್ದು, ಬ್ಯಾಟಿಂಗ್ ಮುಂದುವರೆಸಿದೆ. ಭಾರತದ ಪರ ಅಶ್ವಿನ್ 2 ವಿಕೆಟ್ ಪಡೆದಿದ್ದಾರೆ.