ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ತಂಡದ ಮುಖ್ಯ ಕೋಚ್ ಹುದ್ದೆಗೆ ದೇಶಿ ಪ್ರತಿಭೆ ಚಂದ್ರಕಾಂತ್ ಪಂಡಿತ್ ಅವರನ್ನು ನೇಮಕ ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸೇವೆ ಸಲ್ಲಿಸಿರುವ ಚಂದ್ರಕಾಂತ್ ಸೀತಾರಾಮ್ ಪಂಡಿತ್ ಸದ್ಯ ಮಧ್ಯಪ್ರದೇಶ ಕ್ರಿಕೆಟ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನೇತೃತ್ವದಲ್ಲಿ ಮಧ್ಯಪ್ರದೇಶದ ತಂಡ ಚೊಚ್ಚಲ ರಣಜಿ ಟ್ರೋಫಿಗೆ(2022) ಮುತ್ತಿಕ್ಕಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಬ್ರೆಂಡಮ್ ಮೆಕಲಂ ಸದ್ಯ ಇಂಗ್ಲೆಂಡ್ ಕೋಚ್ ಆಗಿ ನೇಮಕವಾಗಿದ್ದು, ತರವಾಗಿದ್ದ ಮುಖ್ಯ ಕೋಚ್ ಸ್ಥಾನಕ್ಕೆ ದೇಶಿ ಪ್ರತಿಭೆಗೆ ಮಣೆ ಹಾಕಿದೆ. ಚಂದ್ರಕಾಂತ್ ಪಂಡಿತ್ ಭಾರತದ ಪರ 5 ಟೆಸ್ಟ್, 36 ಏಕದಿನ ಪಂದ್ಯ ಆಡಿದ್ದು, 1986ರಿಂದ 1992ರ ಅವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಚಂದ್ರಕಾಂತ್ ಅವರು ಈಗಾಗಲೇ 2018-19ರಲ್ಲಿ ರಣಜಿ ಟ್ರೋಫಿ ಗೆದ್ದ ವಿದರ್ಭ ತಂಡದ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ.