ನವದೆಹಲಿ:"ಚಾಂಪಿಯನ್ ರೈಸ್ ಅಗೈನ್" ಎಂದು ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ಪಂತ್ ಬಗ್ಗೆ ಬರೆದುಕೊಂಡಿದ್ದಾರೆ. ಗುರುವಾರ ರಿಷಬ್ ಪಂತ್ ಅವರನ್ನು ಭೇಟಿಯಾಗಿರುವ ಸಿಕ್ಸರ್ ವೀರ ಯುವರಾಜ್ ಟ್ವಿಟರ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಯುವರಾಜ್ ಸಿಂಗ್ 2011 ಏಕದಿನ ವಿಶ್ವಕಪ್ ವೇಳೆ ಮೆಡಿಯಾಸ್ಟೈನಲ್ ಸೆಮಿನೋಮಾ ಕ್ಯಾನ್ಸರ್ಗೆ ತುತ್ತಾಗಿದ್ದರು. ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಹಲವಾರು ಜನರಿಗೆ ಸ್ಫೂರ್ತಿಯಾಗಿದ್ದರು. ಅವರು ಕ್ಯಾನ್ಸ್ರ್ನಿಂದ ಚೇತರಿಸಿಕೊಂಡು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಮಾರ್ಚ್ 2012 ರಲ್ಲಿ ಅವರ ಮೂರನೇ ಮತ್ತು ಅಂತಿಮ ಕೀಮೋಥೆರಪಿ ಚಿಕಿತ್ಸೆಗೆ ಒಳಗಾದರು. ನಂತರ ಯುವರಾಜ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮತ್ತೆ ವೃತ್ತಿ ಜೀವನಕ್ಕೆ ಮರಳಿದ್ದರು.
ಟ್ವಿಟರ್ನಲ್ಲಿ ರಿಷಬ್ ಪಂತ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಯುವರಾಜ್ ಸಿಂಗ್ ಪಂತ್ ಅವರು ಅಂಬೆಗಾಲು ಇಡುತ್ತಿದ್ದಾರೆ. ಮತ್ತೆ ಚಾಂಪಿಯನ್ ತಂಡದಲ್ಲಿ ಮಿಂಚಲಿದ್ದಾರೆ ಎಂದು ಭರವಸೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಮಗುವಿನ ಹೆಜ್ಜೆಗಳ ಮೇಲೆ!!! ಈ ಚಾಂಪಿಯನ್ ಮತ್ತೆ ಮರಳಲಿದ್ದಾರೆ. ಸುದೀರ್ಘ ಮಾತುಕತೆ ಮತ್ತು ಒಂದಿಷ್ಟು ನಗು. ಧನಾತ್ಮಕ ವ್ಯಕ್ತಿತ್ವ ಮತ್ತು ಯಾವಾಗಲೂ ತಮಾಷೆ!! ನಿಮಗೆ ಹೆಚ್ಚಿನ ಶಕ್ತಿ ಸಿಗಲಿ ರಿಷಬ್ ಪಂತ್ (@rishabpant)" ಎಂದು ಪೋಸ್ಟ್ ಮಾಡಿದ್ದಾರೆ.
ರಿಷಬ್ ಪಂತ್ ಅಪರೂಪದಲ್ಲಿ ಟ್ವಿಟರ್ನಲ್ಲಿ ತಮ್ಮ ಕೆಲ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬುಧವಾರ ಟ್ವಿಟರ್ನಲ್ಲಿ ಪಂತ್ ಸ್ವಿಮಿಂಗ್ ಪೂಲ್ನಲ್ಲಿ ನಡೆಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಊರುಗೋಲು ಬಳಸಿ ನಡೆಯುತ್ತಿದ್ದಾರೆ. ಆದಷ್ಟು ಬೇಗ ಕ್ರಿಕೆಟ್ ಪೀಲ್ಡ್ಗೆ ಪಂತ್ ಮರಳಬೇಕು ಎಂದು ಅಭಿಮಾನಿಗಳ ಜೊತೆಗೆ ಮಾಜಿ ಆಟಗಾರರು ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.