ಕೊಲಂಬೊ: ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಹಾಲ್ ಅವರ ಬೌಲಿಂಗ್ ನೆರವಿನಿಂದ ಪ್ರವಾಸಿ ಭಾರತ ತಂಡ ಶ್ರೀಲಂಕಾವನ್ನು 262 ರನ್ಗಳಿಗೆ ನಿಯಂತ್ರಿಸಿದೆ. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಲಂಕಾ ತಂಡಕ್ಕೆ ಕರುಣರತ್ನೆ 43 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡ ಮೊದಲ ವಿಕೆಟ್ಗೆ 49 ರನ್ ಸೇರಿಸುವ ಮೂಲಕ ಉತ್ತಮ ಆರಂಭ ಪಡೆಯಿತು. ಈ ಹಂತದಲ್ಲಿ ಕಣಕ್ಕಿಳಿದ ಚಹಲ್ 35 ಎಸೆತಗಳಲ್ಲಿ 32 ರನ್ಗಳಿಸಿದ್ದ ಆವಿಷ್ಕಾ ಫರ್ನಾಂಡೊ ವಿಕೆಟ್ ಪಡೆದು ಭಾರತಕ್ಕೆ ಬ್ರೇಕ್ ನೀಡಿದರು.
3ನೇ ಕ್ರಮಾಂಕದಲ್ಲಿ ಬಂದ ಪದಾರ್ಪಣೆ ಆಟಗಾರ ಭನುಕ ರಾಜಪಕ್ಷ ಹೊಡೆಬಡಿ ಆಟಕ್ಕೆ ಮುಂದಾಗಿ ಕುಲ್ದೀಪ್ ಬೌಲಿಂಗ್ನಲ್ಲಿ ಧವನ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಇವರ ಬೆನ್ನಲ್ಲೇ ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಮಿನೋದ್ ಭನುಕ ಕೂಡ ಕುಲ್ದೀಪ್ಗೆ 2ನೇ ಬಲಿಯಾದರು.
4ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಆಗಮಿಸಿದ ಧನಂಜಯ ಡಿ ಸಿಲ್ವಾ 27 ಎಸೆತಗಳಲ್ಲಿ 14 ರನ್ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.