ಮುಂಬೈ :ಕೆಕೆಆರ್ ವಿರುದ್ಧ ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದು ಪಂದ್ಯ ಗೆಲ್ಲುವುದರಲ್ಲಿ ಪ್ರಮುಖ ಪಾತ್ರವಹಿಸಿದ ಯುಜ್ವೇಂದ್ರ ಚಹಲ್ ಪ್ರದರ್ಶನವನ್ನು ಪ್ರಶಂಸಿಸಿರುವ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ,"ಐಪಿಎಲ್ನಲ್ಲಿ ಲೆಗ್ ಸ್ಪಿನ್ನರ್ಗಳು ಏಕೆ ಮ್ಯಾಚ್ ವಿನ್ನರ್ಗಳು ಎನ್ನಲಾಗುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ " ಎಂದು ತಿಳಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ್ದ 218 ರನ್ಗಳ ಬೃಹತ್ ಮೊತ್ತವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಲೀಲಾಜಾಲವಾಗಿ ಹಿಂಬಾಲಿಸುತ್ತಿತ್ತು. ಕೊನೆಯ 4 ಓವರ್‌ವರೆಗೂ ಪಂದ್ಯ ಕೆಕೆಆರ್ ಕೈಯಲ್ಲಿತ್ತು. 24 ಎಸೆತಗಳಲ್ಲಿ 40 ರನ್ಗಳ ಅಗತ್ಯವಿತ್ತು. ಸೆಟ್ ಬ್ಯಾಟರ್ಗಳಾದ ಶ್ರೇಯಸ್ ಅಯ್ಯರ್ (85) ಮತ್ತು ವೆಂಕಟೇಶ್ ಅಯ್ಯರ್ ಕ್ರೀಸ್ನಲ್ಲಿದ್ದರು. ಆದರೆ, 17ನೇ ಓವರ್ ಎಸೆದ ಚಹಲ್ ಪಂದ್ಯದ ಗತಿಯನ್ನೇ ಬದಲಿಸಿದರು.
ಚಹಲ್ ಆ ಓವರ್ನ ಮೊದಲ ಎಸೆತದಲ್ಲಿಯೇ ವೆಂಕಟೇಶ್ ಅಯ್ಯರ್ ವಿಕೆಟ್ ಪಡೆದರೆ, ಕೊನೆಯ 3 ಎಸೆತದಲ್ಲಿ ಶ್ರೇಯಸ್ ಅಯ್ಯರ್ ಸೇರಿದಂತೆ ಮೂರು ವಿಕೆಟ್ ಪಡೆದರು. ಒಟ್ಟಾರೆ ಆ ಒಂದೇ ಓವರ್ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಪಂದ್ಯದ ಗತಿಯನ್ನು ಸಂಪೂರ್ಣ ಬದಲಿಸಿದರು.