ಅಹ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಗೂಗ್ಲಿ ಬೌಲಿಂಗ್ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಿದ್ದರು, ಪಂದ್ಯದಲ್ಲಿ ಅವರ ಸಲಹೆ ಯಶಸ್ವಿಯಾಯಿತು ಎಂದು ಚಹಲ್ ಬಹಿರಂಗಪಡಿಸಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಚಹಲ್ 29ರನ್ ನೀಡಿ 4 ವಿಕೆಟ್ ಪಡೆದು ವಿಂಡೀಸ್ 176ಕ್ಕೆ ಆಲೌಟ್ ಆಗುವಂತೆ ಮಾಡಿದ್ದರು. ಈ ಮೊತ್ತವನ್ನು ಭಾರತ 28 ಓವರ್ಗಳಲ್ಲಿ ತಲುಪಿತ್ತು. ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಚಹಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಪಂದ್ಯದ ಬಳಿಕ ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ವಿಕೆಟ್ ಪಡೆಯುವಲ್ಲಿ ನಿಮ್ಮ ಸಲಹೆ ನೆರವಾಯಿತು ಎಂದು ರೋಹಿತ್ ಶರ್ಮಾ ಜೊತೆ ಮಾತನಾಡುವ ವೇಳೆ ತಿಳಿಸಿದ್ದಾರೆ.
" ನಾನು ದಕ್ಷಿಣ ಆಫ್ರಿಕಾದಲ್ಲಿ ಸಾಕಷ್ಟು ಗೂಗ್ಲಿ ಮಾಡಿರಲಿಲ್ಲ. ನೀವು ಕೂಡ ಪಂದ್ಯಕ್ಕೂ ಮುನ್ನ ಗಮನಕ್ಕೆ ತಂದಿದ್ರಿ. ಹಾರ್ಡ್ ಹಿಟ್ಟರ್ ಸ್ಲಾಟ್ನಲ್ಲಿ ಗೂಗ್ಲಿ ನೆರವಾಗಲಿದೆ ಎನ್ನುವುದು ನನ್ನ ಮನಸ್ಸಿನಲ್ಲಿತ್ತು. ಹಾಗಾಗಿ ಕೀರನ್ ಪೊಲಾರ್ಡ್‌ಗೆ ನೀವು ಹೇಳಿದಂತೆ ಮುಂದೆ ಪಿಚ್ ಹಾಕಿ ಗೂಗ್ಲಿ ಮಾಡಿದೆ. ಅದರಂತೆ ಪೊಲಾರ್ಡ್ ಬೌಲ್ಡ್ ಆದರು" ಎಂದು ಚಹಲ್ ಬಹಿರಂಗಪಡಿಸಿದರು.
ನೀವು ಪಂದ್ಯಕ್ಕೂ ಮೊದಲೇ ಬೌಲಿಂಗ್ನಲ್ಲಿ ಗೂಗ್ಲಿಕಡೆ ಗಮನ ನೀಡಲು ಹೇಳಿದ್ದಿರಿ. ನನ್ನ ಲೆಗ್ಸ್ಪಿನ್ ಅತ್ಯಂತ ಪರಿಣಾಮಕಾರಿ ಎಂದು ಭಾವಿಸಿದ್ದೆ. ನಾನು ನಿಮಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡುವ ರೀತಿಯಲ್ಲೇ ಅವರಿಗೂ ಮಾಡಿದೆ. ನಂತರ ನಾನು ಈ ಪಂದ್ಯಗಳಲ್ಲಿ ಬೇರೆ ಏನಾದರೂ ಮಾಡಬೇಕು ಎಂದು ಅರಿವಾಯಿತು. ನಾನು ಬೌಲ್ ಮಾಡುವ ಎಸೆತಗಳನ್ನು ಸ್ಪಿನ್ ಜೊತೆಗೆ ಗೂಗ್ಲಿಯನ್ನು ಮಿಕ್ಸಪ್ ಮಾಡಲು ಬಯಸಿದೆ ಎಂದು ಚಹಲ್ ಪಂದ್ಯಕ್ಕೂ ಮುನ್ನ ತಾವೂ ಮಾಡಿಕೊಂಡಿದ್ದ ಯೋಜನೆಯನ್ನು ನಾಯಕನ ಜೊತೆಗೆ ಹೇಳಿಕೊಂಡರು.
1000ನೇ ಪಂದ್ಯದಲ್ಲಿ 100ನೇ ವಿಕೆಟ್:ಭಾರತ ಐತಿಹಾಸಿಕ 1000ನೇ ಏಕದಿನ ಪಂದ್ಯವನ್ನಾಡಿತ್ತು, ಈ ಪಂದ್ಯದಲ್ಲಿ 100 ಏಕದಿನ ವಿಕೆಟ್ ಪೂರ್ಣಗೊಳಿಸಿದ ಬಗ್ಗೆ ಮಾತನಾಡಿದ ಚಹಲ್, "ನನಗೆ ಅದ್ಭುತ ಭಾವನೆ ಉಂಟಾಗಿದೆ. ಕಳೆದ ಐದು ವರ್ಷಗಳಿಂದ ನನ್ನ ಕ್ರಿಕೆಟ್ ವೃತ್ತಿ ಜೀವನ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಈ ಸ್ವರೂಪದಲ್ಲಿ 100 ವಿಕೆಟ್ ಪಡೆದಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ.
ಇದೊಂದು ದೊಡ್ಡ ವಿಷಯ. ಇಷ್ಟು ಬೇಗ ಈ ಮೈಲಿಗಲ್ಲನ್ನು ಸ್ಥಾಪಿಸುತ್ತೇನೆ ಎಂದು ಊಹೆ ಕೂಡ ಮಾಡಿರಲಿಲ್ಲ. ನಾನು ಇದೇ ವಿಧಾನದೊಂದಿಗೆ ಬೌಲಿಂಗ್ ಮಾಡುವುದನ್ನು ಮುಂದುವರಿಸುತ್ತೇನೆ" ಎಂದು ಚಹಲ್ ಹೇಳಿದ್ದಾರೆ.
ಇದನ್ನೂ ಓದಿ:1983ರ ವಿಶ್ವಕಪ್ ಗೆದ್ದ ತಂಡ ಗೌರವಿಸಲು ಆ ಕಾಲದಲ್ಲೇ 20 ಲಕ್ಷ ರೂ ದೇಣಿಗೆ ಸಂಗ್ರಹಿಸಿದ್ದರಂತೆ ಗಾನಕೋಗಿಲೆ ಲತಾ ಮಂಗೇಶ್ಕರ್