ನವದೆಹಲಿ:ಭಾರತದ ಬೌಲರ್ ಅರ್ಷದೀಪ್ ಸಿಂಗ್ ಅವರ ವಿಕಿಪಿಡೀಯಾವನ್ನು ಯಾರೋ ಕಿಡಿಗೇಡಿಗಳು ತಿದ್ದಿದ್ದು "ಭಾರತ" ಎಂಬ ಜಾಗದಲ್ಲಿ ಪಂಜಾಬ್ ಪ್ರತ್ಯೇಕತೆಯನ್ನು ಬಯಸುವ "ಖಲಿಸ್ಥಾನ್" ಎಂದು ಬರೆಯಲಾಗಿತ್ತು. ಇದು ಕೋಮು ಸೌಹಾರ್ದತೆ ಮತ್ತು ಆಟಗಾರನ ವೈಯಕ್ತಿಕ ಭದ್ರತೆಗೆ ಧಕ್ಕೆ ತಂದಿದ್ದು, ಈ ಕುರಿತು ವಿವರಣೆ ನೀಡಲು ಸೂಚಿಸಿ ವಿಕಿಡಿಯಾಕ್ಕೆ ಕೇಂದ್ರ ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ನಿನ್ನೆ ಪಾಕಿಸ್ತಾನ ವಿರುದ್ಧದ ಪಂದ್ಯದ ಕೊನೆಯಲ್ಲಿ ಅರ್ಷದೀಪ್ ಸಿಂಗ್ ಸುಲಭದ ಕ್ಯಾಚ್ ಕೈಚೆಲ್ಲಿ ಪಂದ್ಯವನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಇದರ ಲಾಭ ಪಡೆದ ಪಾಕ್ ಅಸೀಫ್ ಅಲಿ ಬೌಂಡರಿ, ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಅರ್ಷದೀಪ್ ಕ್ಯಾಚ್ ಬಿಟ್ಟಿದ್ದು ದುಬಾರಿಯಾದ ಕಾರಣ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿ ಭಾರಿ ಟೀಕೆಗೆ ಗುರಿ ಮಾಡಲಾಗಿದೆ. ಅಲ್ಲದೇ, ಅವರ ವಿಕಿಪೀಡಿಯಾವನ್ನು ತಿದ್ದಿರುವ ಕಿಡಿಗೇಡಿಗಳು ಪಂಜಾಬ್ನ ಅರ್ಷದೀಪ್ ಪ್ರತ್ಯೇಕತಾವಾದ ಬಯಸುವ ಗುಂಪಾದ ಖಲಿಸ್ಥಾನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬಿಂಬಿಸಿದ್ದರು.
ವರದಿ ನೀಡಲು ಸೂಚಿಸಿದ ಕೇಂದ್ರ:ಇದು ಕೋಮುಸೌಹಾರ್ದತೆ ಮತ್ತು ಕ್ರಿಕೆಟಿಗನ ವೈಯಕ್ತಿಕ ಭದ್ರತೆಗೆ ಚ್ಯುತಿ ತಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ವಿಕಿಪೀಡಿಯಾದಲ್ಲಿ ಭಾರತದ ಬದಲಾಗಿ ಖಲಿಸ್ಥಾನ್ ಎಂದು ಬದಲಿಸಿದ ಬಗ್ಗೆ ವರದಿ ನೀಡಲು ವಿಕಿಪೀಡಿಯಾದ ಸಿಇಒಗೆ ನೋಟಿಸ್ ನೀಡಿದೆ.
ಅಲ್ಲದೇ ಈ ಬಗ್ಗೆ ಖುದ್ದು ಉತ್ತರ ನೀಡಲು ಎನ್ಸೈಕ್ಲೋಪೀಡಿಯಾದ ಕಾರ್ಯನಿರ್ವಾಹಕರನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಭಾರತದ ಬದಲಿಗೆ ಖಲಿಸ್ಥಾನ್ ಎಂದು ಬರೆದ ಪದವನ್ನು ಗುರುತಿಸಿದ ವಿಕಿಪೀಡಿಯಾ 15 ನಿಮಿಷದಲ್ಲಿ ರದ್ದು ಮಾಡಿದೆ.