ಮುಂಬೈ: ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ನಲ್ಲಿ ನಾಲ್ಕನೇ ಕ್ರಮಾಂಕವು ಮೊದಲಿನಿಂದಲೂ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಕೆಲ ತಿಂಗಳುಗಳು ಬಾಕಿ ಇದ್ದು, ತಂಡದ ನಾಯಕ ರೋಹಿತ್ ಶರ್ಮಾ ಕೂಡ ನಾಲ್ಕನೇ ಕ್ರಮಾಂಕದ ಅಸ್ಥಿರತೆ ಬಗ್ಗೆ ಮಾತನಾಡಿದ್ದಾರೆ.
ಮುಂಬೈನಲ್ಲಿ ಲಾಲಿಗಾ ಕಾರ್ಯಕ್ರಮದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರೋಹಿತ್, ತಂಡದ ಪ್ರಮುಖ ಬ್ಯಾಟಿಂಗ್ ವಿಭಾಗದ ಬಗ್ಗೆ ಅನಿಸಿಕೆ ಹಂಚಿಕೊಳ್ಳುತ್ತ, ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಯಾವೊಬ್ಬ ಆಟಗಾರನೂ ಸಹ ಸ್ಥಿರವಾಗಿ ಸ್ಥಾನ ಕಾಯ್ದುಕೊಳ್ಳಲಿಲ್ಲ. ಇದು ಹಲವು ವರ್ಷಗಳಿಂದಲೂ ನಮ್ಮ ತಂಡದಲ್ಲಿ ಚರ್ಚಾ ವಿಷಯವಾಗಿದೆ. ಬಹುದಿನದ ಸಮಸ್ಯೆಯಾಗಿದ್ದು, ಇಂಗ್ಲೆಂಡ್ನಲ್ಲಿ ನಡೆದ ಕಳೆದ ವಿಶ್ವಕಪ್ನಲ್ಲಿಯೂ ಇತ್ತು ಎಂದು ಹೇಳಿದರು.
ಸುಮಾರು ವರ್ಷಗಳ ತನಕ ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಯಶಸ್ಸು ಕಂಡಿದ್ದರು. ಆದರೆ, ದುರಾದೃಷ್ಟವಶಾತ್ ಗಾಯಗೊಂಡಿದ್ದರಿಂದ ತಂಡದಿಂದ ಹೊರಗುಳಿಯಬೇಕಾಯಿತು. 4-5 ವರ್ಷಗಳವರೆಗೆ ಅಯ್ಯರ್ ಉತ್ತಮ ಪ್ರದರ್ಶನ ತೋರಿದ್ದರು. ಬಳಿಕ ಹಲವರು ಗಾಯಕ್ಕೆ ತುತ್ತಾದ ಕಾರಣ ಬೇರೆ ಬೇರೆ ಆಟಗಾರರು ಆ ಕ್ರಮಾಂಕದಲ್ಲಿ ಬಂದು ಬ್ಯಾಟ್ ಮಾಡಿದ್ದಾರೆ. ಕೆಲ ಬ್ಯಾಟರ್ಗಳು ಗಾಯಗೊಂಡರೆ, ಮತ್ತೆ ಕೆಲವರು ಕಳಪೆ ಫಾರ್ಮ್ನಿಂದ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ ಎಂದರು.
2019ರ ಏಕದಿನ ವಿಶ್ವಕಪ್ ಬಳಿಕ 4ನೇ ಕ್ರಮಾಂಕದಲ್ಲಿ 11 ಮಂದಿ ಆಟಗಾರರು ಬ್ಯಾಟ್ ಮಾಡಿದ್ದಾರೆ. ಅದರಲ್ಲಿ ಐಯ್ಯರ್ ಹಾಗೂ ರಿಷಭ್ ಪಂತ್ 10ಕ್ಕೂ ಅಧಿಕ ಸಲ ಕಣಕ್ಕಿಳಿದಿದ್ದಾರೆ. ಸದ್ಯ ಪಂತ್ ಗಾಯದಿಂದಾಗಿ 2023ರ ವಿಶ್ವಕಪ್ನಿಂದ ಹೊರಬಿದ್ದಿದ್ದು, ಇನ್ನೊಂದೆಡೆ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ.