ಕೋಲ್ಕತ್ತಾ:ಯುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ತಮ್ಮಲ್ಲಿನ ಕೌಶಲ್ಯದೊಂದಿಗೆ ಬೌಲಿಂಗ್ ಮಾಡುವುದನ್ನು ನೋಡಲು ಸಂತಸವಾಗಿದೆ. ಇದನ್ನೇ ಮುಂದುವರೆಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ ಎಂದು ಭಾರತ ಟಿ-20 ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದರು.
14ನೇ ಐಪಿಎಲ್ನ ಎರಡನೇ ಹಂತದಲ್ಲಿ ಗಮನಾರ್ಹ ಪ್ರದರ್ಶನದ ಮೂಲಕ ವೆಂಕಟೇಶ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದರು. ಕಿವೀಸ್ ವಿರುದ್ಧದ 3 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಿದರು. ಕೋಲ್ಕತ್ತಾದಲ್ಲಿ ನಡೆದ 3ನೇ ಪಂದ್ಯದಲ್ಲೂ 73 ರನ್ಗಳಿಂದ ಗೆದ್ದ ಭಾರತ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಸರಣಿಯಲ್ಲಿನ ಧನಾತ್ಮಕ ಅಂಶಗಳ ಬಗ್ಗೆ ಮಾತನಾಡುತ್ತ, ವಿಶ್ವದ ಹಲವು ತಂಡಗಳು ನಂ. 8 ಮತ್ತು ನಂ. 9ವರೆಗೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿವೆ.
ಹರ್ಷಲ್, ಹರಿಯಾಣ ಪರ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೇ, ದೀಪಕ್ ಚಹರ್ ಕೂಡ ಅದಾಗಲೇ ಶ್ರೀಲಂಕಾದಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯ ತೋರ್ಪಡಿಸಿದ್ದಾರೆ ಎಂದು ಶ್ಲಾಘಿಸಿದರು.
ನಿನ್ನೆಯ ಪಂದ್ಯದಲ್ಲಿ ಹರ್ಷಲ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 11 ಎಸೆತಗಳಲ್ಲಿ 18 ಹಾಗೂ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಚಹರ್ 9 ಎಸೆತಗಳಲ್ಲಿ 21 ರನ್ ಚಚ್ಚಿದ್ದರು. ಇವರ ಅಬ್ಬರದಿಂದ ಕೊನೆಯ ಐದು ಓವರ್‌ಗಳಲ್ಲಿ ತಂಡವು 50 ರನ್ ಬಾರಿಸಿ 184 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.