ಆಕ್ಲೆಂಡ್ :ಫೆಬ್ರವರಿ 17ರಂದು ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲ್ಯಾಂಡ್ ತಂಡ ತನ್ನ 15 ಮಂದಿಯ ಆಟಗಾರರ ಹೆಸರನ್ನು ಪ್ರಕಟಿಸಿದೆ. ಮೊಣಕೈ ಗಾಯದಿಂದ ಬಳಲುತ್ತಿರುವ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್‌ಗೆ ಅಲಭ್ಯವಾಗಲಿದ್ದಾರೆ ಎನ್ನಲಾಗುತ್ತಿದೆ.
ಕಳೆದ 15 ತಿಂಗಳಿನಿಂದ ಅವರನ್ನು ಈ ಮೊಣಕೈ ಗಾಯ ವಿಪರೀತ ಕಾಡುತ್ತಿದೆ. ಟಾಮ್ ಲ್ಯಾಥಮ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಮಾಹಿತಿ ನೀಡಿದ್ದಾರೆ. ಅವರು ಸಂಪೂರ್ಣ ಚೇತರಿಸಿಕೊಳ್ಳಬೇಕು ಎಂದರೆ ಇನ್ನೂ ಕೆಲವು ವಾರಗಳು ಬೇಕಾಗಿದ್ದು, ಅಲ್ಲಿಯವರೆಗೆ ವಿಶ್ರಾಂತಿಯಲ್ಲಿರಲಿದ್ದಾರೆ.
ಗಾಯದಿಂದ ಹೊರ ಬರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ 31 ವರ್ಷದ ಕೇನ್ ವಿಲಿಯಮ್ಸನ್, ಅವರಿವರ ಸಲಹೆ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಸ್ಟೀವ್ ಸ್ಮಿತ್ ಮತ್ತು ಭಾರತೀಯ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿ ಹೇಳಿದೆ.
ಪ್ರತಿಯೊಬ್ಬ ಆಟಗಾರ ಒಂದಿಲ್ಲೊಂದು ಗಾಯದ ಸಮಸ್ಯೆಯಿಂದ ಬಳಲುತ್ತಲೇ ಇರುತ್ತಾರೆ. ಇದು ಬಹಳ ಕಷ್ಟದ ಸಮಯ. ಆದರೂ ಖಂಡಿತವಾಗಿಯೂ ಈ ಸಮಸ್ಯೆಯಿಂದ ನಾನು ಹೊರ ಬರುತ್ತೇನೆ. ಈ ದಿಶೆಯಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್ (NZC) ನನ್ನ ಬೆಂಬಲಕ್ಕೆ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.