ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ಪಡೆ ಮೇಲೆ ಕೀವಿಸ್ ತಂಡ ಮೊದಲ ದಿನ ಸವಾರಿ ಮಾಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ ದಿನದಂತ್ಯಕ್ಕೆ 7 ವಿಕೆಟ್‌ಗೆ 258 ರನ್ ಗಳಿಸಿದೆ. ಡೇನ್ ಲಾರೆನ್ಸ್ (67*) ಜತೆಗೆ ಮಾರ್ಕ್ ವುಡ್ (16*) ಕ್ರೀಸ್‌ನಲ್ಲಿದ್ದಾರೆ. ಡೊಮ್ ಸಿಬ್ಲೆ (35) ಜತೆಗೆ ಬರ್ನ್ಸ್ ಮೊದಲ ವಿಕೆಟ್‌ಗೆ 72 ರನ್ ಸೇರಿಸಿದ ಬಳಿಕ ಇಂಗ್ಲೆಂಡ್ ಕುಸಿತ ಕಂಡಿತು. ಜಾಕ್ ಕ್ರೌಲಿ (0), ನಾಯಕ ಜೋ ರೂಟ್ (4) ಮತ್ತು ಒಲಿ ಪೋಪ್ (19) ರನ್ ಗಳಿಸಿ ವೈಫಲ್ಯ ಕಂಡರು.
ಆರಂಭಿಕ ರೋರಿ ಬರ್ನ್ಸ್ (81 ರನ್, 187 ಎಸೆತ, 10 ಬೌಂಡರಿ) ಮತ್ತು ಡೇನ್ ಲಾರೆನ್ಸ್ (67*ರನ್, 100 ಎಸೆತ, 11 ಬೌಂಡರಿ) ಪ್ರವಾಸಿ ನ್ಯೂಜಿಲೆಂಡ್ ತಂಡದ ಬೌಲರ್‌ಗಳ ದಾಳಿಗೆ ಕುಸಿದ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದಾರೆ.
ಆಂಡರ್‌ಸನ್ ದಾಖಲೆ:ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್‌ಸನ್ 162ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಮೂಲಕ ಇಂಗ್ಲೆಂಡ್ ಪರ ಗರಿಷ್ಠ ಟೆಸ್ಟ್ ಪಂದ್ಯ ಆಡಿದ ಮಾಜಿ ನಾಯಕ ಅಲಸ್ಟೇರ್ ಕುಕ್(161) ದಾಖಲೆ ಮುರಿದರು. ಮೊದಲ ದಿನದಾಟಕ್ಕೆ 17 ಸಾವಿರ ಪ್ರೇಕ್ಷಕರು ಹಾಜರಾದರು.