ಲಂಡನ್: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ 2022ರ ಸಾಲಿನ ವಿಸ್ಡನ್ ವರ್ಷದ 5 ಕ್ರಿಕೆಟಿಗರ ಪಟ್ಟಿಯಲ್ಲಿ ಅವಕಾಶ ಪಡೆದಿದ್ದಾರೆ. ಇವರ ಜೊತೆಗೆ ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ, ಇಂಗ್ಲೆಂಡ್ ವೇಗಿ ಒಲಿ ರಾಬಿನ್ಸನ್ ಮತ್ತು ದಕ್ಷಿಣ ಆಫ್ರಿಕಾದ ನಾಯಕಿ ಡೇನ್ ವ್ಯಾನ್ ನೀಕರ್ಕ್ ಕೂಡ ಈ ಗೌರವಕ್ಕೆ ಪಾತ್ರರಾಗಿರುವ ಇತರೆ ಮೂವರು ಕ್ರಿಕೆಟಿಗರಾಗಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ 2022ರ ಆವೃತ್ತಿಯ ವಿಶ್ವದ ಲೀಡಿಂಗ್ ಕ್ರಿಕೆಟರ್ ಎಂದು ಗುರುತಿಸಿಕೊಂಡಿದ್ದಾರೆ. ರೂಟ್ 2021ರಲ್ಲಿ ಇಡೀ ತಂಡ ಕಳಪೆ ಪ್ರದರ್ಶನ ತೋರಿದರೂ 6 ಶತಕಗಳ ಸಹಿತ 15,000ಕ್ಕೂ ಹೆಚ್ಚು ರನ್ಗಳಿಸಿದ್ದರು. ದಕ್ಷಿಣ ಆಫ್ರಿಕಾದ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಲಿಜೆಲ್ಲೆ ಲೀ ಅವರು ವಿಶ್ವದ ಮಹಿಳಾ ಲೀಡಿಂಗ್ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಸ್ಪ್ರೀತ್ ಬುಮ್ರಾ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಎರಡು ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಲಾರ್ಡ್ಸ್ನಲ್ಲಿ 33ಕ್ಕೆ 3 ವಿಕೆಟ್ ಪಡೆದರೆ, ಓವಲ್ ಟೆಸ್ಟ್ನಲ್ಲಿ ಸತತ ಎರಡು ಓವರ್ಗಳಲ್ಲಿ ಜಾನಿ ಬೈರ್ಸ್ಟೋವ್ ಮತ್ತು ಒಲಿ ಪೋಪ್ ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಅಲ್ಲದೆ ಮಳೆಯಿಂದ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಕೊನೆಯ ದಿನ ರದ್ದಾಗದಿದ್ದರೆ ಅವರ 9 ವಿಕೆಟ್ ಪ್ರದರ್ಶನ ಭಾರತಕ್ಕೆ ಮತ್ತೊಂದು ಗೆಲುವು ತಂದುಕೊಡುತ್ತಿತ್ತು ಅನ್ನಿಸುತ್ತದೆ. ಇನ್ನು 4 ಪಂದ್ಯಗಳಲ್ಲಿ ಅವರು 18 ವಿಕೆಟ್ ಮತ್ತು ತಂಡಕ್ಕೆ ಕೆಲವು ಅತ್ಯಮೂಲ್ಯವಾದ ರನ್ಗಳನ್ನು ಅವರು ಬಾರಿಸಿದ್ದಾರೆ ಎಂದು ಬುಮ್ರಾ ಆಯ್ಕೆಯ ಬಗ್ಗೆ ವಿಸ್ಡನ್ ಸಂಪಾದಕ ಲಾರೆನ್ಸ್ ಬೂತ್ ತಿಳಿಸಿದ್ದಾರೆ.