ನವದೆಹಲಿ: ಭಾರತದ ವೇಗದ ಬೌಲರ್ ಜಸ್ಪ್ರಿತ್ ಬೂಮ್ರಾ ಅವರು ಬೆನ್ನುನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗಾಗಿ ನ್ಯೂಜಿಲ್ಯಾಂಡ್ಗೆ ಹಾರುವ ಸಾಧ್ಯತೆಯಿದೆ. ಬಿಸಿಸಿಐ ವೈದ್ಯಕೀಯ ತಂಡ ಮತ್ತು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ (ಎನ್ಸಿಎ) ವ್ಯವಸ್ಥಾಪಕರು ರೋವನ್ ಸ್ಕೌಟನ್ ಎಂಬ ಶಸ್ತ್ರಚಿಕಿತ್ಸಕರನ್ನು ಅಂತಿಮಗೊಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ರೋವನ್ ಸ್ಕೌಟೆನ್ ಅವರು ಇಂಗ್ಲೇಡ್ನ ವೇಗದ ಬೌಲರ್ ಜೋಫ್ರಾ ಆರ್ಚರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾಗ ಶಸ್ತ್ರಚಿಕಿತ್ಸೆ ಮಾಡಿ ಗುಣ ಪಡಿಸಿದ್ದರು.
ಕಳೆದ ಐದು ತಿಂಗಳಿನಿಂದ ಮೈದಾನದಿಂದ ಹೊರಗುಳಿದಿರುವ ಬೂಮ್ರಾ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಆಕ್ಲೆಂಡ್‌ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿಂದೆ ಸ್ಕೌಟನ್ ಅವರು ಪ್ರಸಿದ್ಧ ಮೂಳೆ ಶಸ್ತ್ರ ಚಿಕಿತ್ಸಕ ಗ್ರಹಾಂ ಇಂಗ್ಲಿಸ್ ಅವರೊಂದಿಗೆ ಕಾರ್ಯನಿರ್ವಹಿಸಿದ್ದರು. ಗ್ರಹಾಂ ಇಂಗ್ಲಿಸ್ ಅವರು ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಶೇನ್ ಬಾಂಡ್ ಸೇರಿದಂತೆ ಕೆಲವು ಆಟಗಾರರಿಗೆ ಗಾಯದ ಸಮಸ್ಯೆಯಿಂದ ಹೊರಬರಲು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿರುವ ಶೇನ್ ಬಾಂಡ್ ಅವರು ಸ್ಕೌಟನ್ ಹೆಸರನ್ನು ಸೂಚಿಸಿರುವ ಸಾಧ್ಯತೆಯಿದೆ.
ಬೆನ್ನು ನೋವಿನಿಂದ ಬೂಮ್ರಾ ಅವರು ಮೊದಲಿನಂತೆ ಚೇತರಿಸಿಕೊಳ್ಳಲು ಸುಮಾರು 20 ರಿಂದ 24 ವಾರಗಳ ಕಾಲ ಬೇಕಾಗುತ್ತದೆ. ಈ ಸಮಯದಲ್ಲಿ ಅವರು 2023ರ ಐಪಿಎಲ್ ಆವೃತ್ತಿ ಮತ್ತು ಭಾರತ ತಂಡ ಫೈನಲ್ಗೆ ಅರ್ಹತೆ ಹೊಂದಿದರೆ ಲಂಡನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಪೈನಲ್ ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು. ಬೂಮ್ರಾ ಅವರು 2022ರ ಸಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಕೊನೆಯಾದಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ನಂತರ ಬೆನ್ನು ನೋವಿಗೆ ತುತ್ತಾಗಿ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದರು. ಈ ವರ್ಷ ಅಕ್ಟೋಬರ್ -ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಬೂಮ್ರಾ ಅವರನ್ನು ಸಿದ್ಧಗೊಳಿಸುವುದು ಬಿಸಿಸಿಐ ಆಡಳಿತದ ಪ್ರಸ್ತುತ ಆದ್ಯತೆಯಾಗಿದೆ.