ಡಬ್ಲಿನ್, ಐರ್ಲೆಂಡ್:ಇಲ್ಲಿನ ವಿಲೇಜ್ ಮೈದಾನದಲ್ಲಿ ನಡೆದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ ತಂಡ 2 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಸರಣಿಯ ನಾಯಕರೂ ಆಗಿರುವ ಬುಮ್ರಾ ಸುಮಾರು 11 ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೆ ಮರಳಿದ್ದು, ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತ್ತು. ಐರ್ಲೆಂಡ್ ಪರ ಬ್ಯಾರಿ ಮೆಕಾರ್ಥಿ ಅರ್ಧಶತಕ ಗಳಿಸಿ ಗರಿಷ್ಠ ಸ್ಕೋರರ್ ಆದರು. ಭಾರತದ ಪರ ಬುಮ್ರಾ, ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ನೋಯಿ ತಲಾ 2 ವಿಕೆಟ್ ಪಡೆದು ಮಿಂಚಿದರು.
140 ರನ್‌ಗಳ ಗುರಿಯೊಂದಿಗೆ ಕಣ ಇಳಿದ ಟೀಂ ಇಂಡಿಯಾ 47/2 ಎಂಬ ಹಂತದಲ್ಲಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. ಆಗ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದಡಿ ಎರಡು ರನ್‌ಗಳ ಲೀಡ್ ಪಡೆದಿತ್ತು. ಮಳೆ ಕಡಿಮೆಯಾಗುತ್ತಿದ್ದಂತೆ ಅಂಪೈರ್‌ಗಳು ಡಕ್ವರ್ತ್ ಲೂಯಿಸ್ ವಿಧಾನದಲ್ಲಿ ಭಾರತವನ್ನು ವಿಜಯಿ ಎಂದು ಘೋಷಿಸಿದರು.
ಐರ್ಲೆಂಡ್‌ಗೆ ಆರಂಭಿಕ ಆಘಾತ: ಐರ್ಲೆಂಡ್ ತಂಡ ಮೊದಲಿನಿಂದಲೂ ಕಳಪೆ ಆರಂಭ ಪಡೆಯಿತು. ಐರ್ಲೆಂಡ್ ತಂಡ 31 ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡಿತ್ತು. 11 ತಿಂಗಳ ನಂತರ ಕ್ರಿಕೆಟ್‌ಗೆ ಮರಳಿದ ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲೇ ಐರ್ಲೆಂಡ್ನ ಎರಡು ವಿಕೆಟ್ಗಳನ್ನು ಪಡೆದು ಮಿಂಚಿದರು.