ಚಂಡೀಗಢ :ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯಕ್ಕಾಗಿ ಎರಡೂ ತಂಡಗಳು ಹೋಟೆಲ್ನಿಂದ ಮೊಹಾಲಿಯ ಪಿಸಿಎ ಸ್ಟೇಡಿಯಂಗೆ ಕರೆದೊಯ್ಯಬೇಕಿದ್ದ ಬಸ್‌ನಲ್ಲಿ ಎರಡು ಬುಲೆಟ್ ಶೆಲ್ಗಳು ಪತ್ತೆಯಾಗಿದ್ದು, ಭದ್ರತಾ ಅಧಿಕಾರಿಗಳಲ್ಲಿ ಕೋಲಾಹಲ ಉಂಟಾಗಲು ಕಾರಣವಾಗಿದೆ.
ಮಾರ್ಚ್ 4ರಿಂದ ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳ ಕೆಲವು ಸದಸ್ಯರು ಶನಿವಾರವೇ ಚಂಡೀಗಢ ತಲುಪಿದ್ದಾರೆ. ಎರಡೂ ತಂಡಗಳಿಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಆದರೂ ಟೀಂ ಇಂಡಿಯಾ ಆಟಗಾರರು ಮೊಹಾಲಿಗೆ ಅಭ್ಯಾಸಕ್ಕೆ ತೆರಳಬೇಕಿದ್ದ ಬಸ್‌ನಲ್ಲಿ ಎರಡು ಗುಂಡಿನ ಶೆಲ್ಗಳು ಪತ್ತೆಯಾಗಿದ್ದು, ಹಲವು ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಪ್ರಸ್ತುತ ಸಿಕ್ಕಿರುವ ಮಾಹಿತಿ ಪ್ರಕಾರ ಚಂಡೀಗಢದ ಐಟಿ ಪಾರ್ಕ್‌ನಲ್ಲಿರುವ ಲಲಿತ್ ಹೋಟೆಲ್‌ನಲ್ಲಿ ಭಾರತ ಕ್ರಿಕೆಟ್ ತಂಡ ತಂಗಿದೆ. ಅಲ್ಲಿಂದ ತಂಡವು ಮೊಹಾಲಿಯ ಪಿಸಿಎ ಸ್ಟೇಡಿಯಂಗೆ ಬಸ್‌ನಲ್ಲಿ ಅಭ್ಯಾಸಕ್ಕೆ ಹೋಗಬೇಕಿತ್ತು. ಭದ್ರತಾ ಸಿಬ್ಬಂದಿ ಬಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದರು. ತನಿಖೆಯ ವೇಳೆ ಬಸ್‌ನ ಲಗೇಜ್ ಬಾಕ್ಸ್‌ನಲ್ಲಿ ಎರಡು ಗುಂಡಿನ ಶೆಲ್ಗಳ ಪತ್ತೆಯಾಗಿದ್ದವು.