ಮುಂಬೈ: 2022ರ ಐಪಿಎಲ್ ಮೆಗಾ ಹರಾಜಿನಲ್ಲಿ 3.2 ಕೋಟಿ ರೂ ಒಪ್ಪಂದ ಪಡೆಯುವ ಮೂಲಕ ಯುವ ಎಡಗೈ ವೇಗಿ ಯಶ್ ದಯಾಳ್ ದೊಡ್ಡ ಮಟ್ಟದ ಕ್ರಿಕೆಟರ್ ಆಗಿ ಗುರುತಿಸಿಕೊಳ್ಳಬೇಕೇಂಬ ಅವರ ತಂದೆ ಚಂದ್ರಪಾಲ್ ದಯಾಳ್ ಅವರ ಕನಸನ್ನು ಇಡೇರಿಸಿಕೊಂಡಿದ್ದಾರೆ.
ಐಪಿಎಲ್ ಒಂದು ಕಡೆ ಬಡತನದ ಬೇಗೆಯಲ್ಲಿ ನಲುಗಿದವರಿಗೆ ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳಲು ನೆರವಾದರೆ, ಇನ್ನೂ ಕೆಲವರಿಗೆ ಕ್ರಿಕೆಟರ್ ಆಗಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ದೊಡ್ಡ ವೇದಿಕೆಯಾಗಲಿದೆ. ಯಶ್ ದಯಾಳ್ ತಂದೆ ಸ್ವತಃ ಮಧ್ಯಮ ವೇಗಿಯಾಗಿ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಆಡಿದರಾದರೂ, ಅನುವಾರ್ಯ ಕಾರಣಗಳಿಂದ ಕ್ರಿಕೆಟ್ನಲ್ಲಿ ಮುಂದುವರಿಯಲು ಸಾಧ್ಯವಾಗದೇ ಅರ್ಧದಲ್ಲೇ ತಮ್ಮ ಕನಸನ್ನು ಮೊಟಕುಗೊಳಿಸಿದ್ದರು. ಇದೀಗ ಅವರ ಮಗ ಮಲ್ಟಿ ಮಿಲಿಯನ್ ಡಾಲರ್ ಟೂರ್ನಮೆಂಟ್ನಲ್ಲಿ ಅವಕಾಶ ಪಡೆಯುವ ಮೂಲಕ ಅಪ್ಪನ ಆಸೆ ಈಡೇರಿಸಿದ್ದಾರೆ.
24 ವರ್ಷದ ಅಲಹಾಬಾದ್ ಯುವ ಪೇಸರ್ನನ್ನು ಗುಜರಾತ್ ಟೈಟನ್ಸ್ ಭಾನುವಾರ 3.2 ಕೋಟಿ ರೂ ನೀಡಿ ಖರೀದಿಸಿತು. ಇದು ಅವರ ಕುಟುಂಬ ಮತ್ತು ಸ್ನೇಹಿತರ ಬಳಗದಲ್ಲಿ ಸಂಭ್ರಮ ಮನೆಮಾಡುವಂತೆ ಮಾಡಿದೆ.
ಇದನ್ನೂ ಓದಿ:ಗುಡಿಸಲಿನಲ್ಲಿ ವಾಸ, 9 ವರ್ಷ ಪ್ಲಂಬರ್ ಆಗಿ ಕೆಲಸ.. ಅದೇ ಯುವಕನಿಗೆ ಸಿಕ್ತು ರಣಜಿ ತಂಡದಲ್ಲಿ ಚಾನ್ಸ್!
ಯಶ್ ತಂದೆ ಕೂಡ ಕ್ರಿಕೆಟಿಗ, ಅವರು ವಿಜಯ ಹಜಾರೆ ಟ್ರೋಪಿಯಲ್ಲಿ ಆಡಿದ್ದರು, ಅವರೂ ಕೂಡ ಮಧ್ಯಮ ವೇಗಿ, ಆದರೆ ಕೆಲವು ಕಾರಣಗಳಿಂದ ಕ್ರಿಕೆಟ್ನಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಅವರು ಪ್ರಸ್ತುತ ಅಲಹಬಾದ್ನ ಎಜಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟಿಗನಾಗುವ ಅವರ ಕನಸನ್ನು ಮಗ ಈಡೇರಿಸಿದ್ದಾರೆ ಎಂದು ಯಶ್ ಕೋಚ್ ಅಮಿತ್ ಪಾಲ್ ಪಿಟಿಐಗೆ ತಿಳಿಸಿದ್ದಾರೆ.
ಚಂದ್ರಪಾಲ್, ಯಶ್ನನ್ನು ನನ್ನ ಬಳಿ ತಂದು ಬಿಟ್ಟಾಗ ಆತನ ವಯಸ್ಸು 14-15 ಆಗಿತ್ತು. ನಾನು ಆಗ ಮದನ್ ಮೋಹನ ಮಾಳವೀಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಕೋಚ್ ಆಗಿದ್ದೆ. ಆತ ವಯೋಮಾನದ ಕ್ರಿಕೆಟ್ ಆಡುತ್ತಲೇ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಂಡಿದ್ದರು ಎಂದು ಬಣ್ಣಿಸಿದ್ದಾರೆ.
ಯಶ್ ಅಂಡರ್ 19 ಕ್ಯಾಂಪ್ಗೆ ಆಯ್ಕೆಯಾಗಿದ್ದ, ಆದರೆ ಆ ಬಾರಿ ಅಂಡರ್ 19 ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆದರೆ ಅವನು ತನ್ನ ಕಠಿಣ ಶ್ರಮವನ್ನು ಮುಂದುವರಿಸಿ ಅಂಡರ್ 23ರ ತಂಡದಲ್ಲಿ ಅವಕಾಶ ಪಡೆದ. ಆದರೆ, ಅಲ್ಲೂ ಕೂಡ ಮೊದಲ ಒಂದರೆಡು ಪಂದ್ಯಗಳಲ್ಲಿ 1 ಅಥವಾ 2 ವಿಕೆಟ್ ಪಡೆದಿದ್ದ. ನಂತರದ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿ ಮಧ್ಯಪ್ರದೇಶದ ವಿರುದ್ಧ 8 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದನು. ರಣಜಿ ಟ್ರೋಫಿಯಲ್ಲಿ ಆತನ ಕ್ರಿಕೆಟ್ ಬೆಳವಣಿಗೆ ದಿನದಿಂದ ದಿನಕ್ಕೆ ಹೆಚ್ಚಾಯಿತು ಎಂದು ಪಾಲ್ ಹೇಳಿದ್ದಾರೆ.
ಉತ್ತರ ಪ್ರದೇಶ ವಿಜಯ ಹಜಾರೆ ಟ್ರೋಫಿಯಲ್ಲಿ ಫೈನಲ್ ಪ್ರವೇಶ ಮಾಡಿದ್ದ ವೇಳೆ ಯಶ್ ನಾಕೌಟ್ ಪಂದ್ಯಗಳಲ್ಲಿ ಅವಕಾಶ ಪಡೆದಿದ್ದರು. ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯ ನೆಟ್ ಬೌಲರ್ ಆಗಿಯೂ ಕೂಡ ಆಯ್ಕೆಯಾಗಿದ್ದರು ಎಂದು ಪಾಲ್ ನೆನೆಪಿಸಿಕೊಂಡರು.
ಚಿಕ್ಕಂದಿನಿಂದ ಯಶ್ ದಯಾಳ್ ಅವರನ್ನು ಹತ್ತಿರದಿಂದ ನೋಡಿರುವ ಪಾಲ್, ನಾನು ಆತನಿಗೆ ಒಂದು ಹಂತಕ್ಕೆ ತಲುಪಿದ್ದೀಯ, ಇನ್ಮುಂದೆ ನಿನ್ನ ಪರಿಶ್ರಮವನ್ನು ದುಪ್ಪಟ್ಟು ಮಾಡು, ದೊಡ್ಡ ಮಟ್ಟದ ಕ್ರಿಕೆಟ್ ಆಡುವಾಗಿ ನೀನು ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿರುವುದಾಗಿ ಯಶ್ ಕೋಚ್ ತಿಳಿಸಿದ್ದಾರೆ.
ಇದನ್ನೂ ಓದಿ:ಟೆನಿಸ್ ಬಾಲ್ ಕ್ರಿಕೆಟ್ ಮೂಲಕವೇ ಕೆಕೆಆರ್ ತಂಡದಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಚಮ್ಮಾರನ ಮಗ.. ಇಲ್ಲಿದೆ ರೋಚಕ ಕ್ರಿಕೆಟ್ ಜರ್ನಿ