ಅಲ್ ಅಮೆರತ್ (ಓಮನ್): ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದಲ್ಲಿ ನಾವು ಕೆಲವು ಅಚ್ಚರಿಯ ಆಘಾತ ನೀಡಲು ಸಿದ್ಧರಾಗಿದ್ದೇವೆ. ಅಂತಹ ಪ್ರದರ್ಶನ ನೀಡಲು ನಮ್ಮಿಂದಾಗುವುದಿಲ್ಲ ಎಂದು ತಮಗೆ ಅನಿಸುತ್ತಿಲ್ಲ. ಈ ಹಿಂದೆಯೂ ಕೂಡ ನಾವು ಅದನ್ನು ಸಾಧಿಸಿ ತೋರಿಸಿದ್ದೇವೆ ಎಂದು ಸ್ಕಾಟ್ಲೆಂಡ್ ತಂಡದ ಎಡಗೈ ಸ್ಪಿನ್ನರ್ ಮಾರ್ಕ್ ವ್ಯಾಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಓಮನ್ ಮಣಿಸಿದ ಸ್ಕಾಟ್ಲೆಂಡ್, ಗ್ರೂಪ್ನಲ್ಲಿ ಮೂರೂ ಪಂದ್ಯಗಳಿಂದ ಜಯ ಸಾಧಿಸಿ ಅಗ್ರ ತಂಡವಾಗಿ ವಿಶ್ವಕಪ್ ಸೂಪರ್-12 ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ವ್ಯಾಟ್, ನಾವು ಈ ಹಿಂದೆ ಅತ್ಯುತ್ತಮ ಏಕದಿನ ತಂಡಕ್ಕೆ ಸೋಲಿನ ರುಚಿ ನೀಡಿದ್ದೇವೆ.
ಅಲ್ಲದೇ ಸದ್ಯ ಅರ್ಹತಾ ಸುತ್ತಿನಲ್ಲಿ ಬಾಂಗ್ಲಾ ವಿರುದ್ಧ ಗೆಲುವು ಸಾಧಿಸಿದ್ದೇವೆ. ತಂಡವು ಉತ್ತಮ ಫಾರ್ಮ್ನಲ್ಲಿದೆ. ಟೂರ್ನಿಯಲ್ಲಿ ಇತರ ತಂಡಗಳು ನಮ್ಮನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮಾರ್ಕ್ ಹೇಳಿದರು.
ಇದನ್ನೂ ಓದಿರಿ:IPL 2022: ನಾಲ್ವರು ಪ್ಲೇಯರ್ಸ್ಗೆ ಉಳಿಸಿಕೊಳ್ಳಲು ಅವಕಾಶ... RTMಗಿಲ್ಲ ಚಾನ್ಸ್!
ವಿಶ್ವಕಪ್ನಲ್ಲಿ ಪ್ರಬಲ ತಂಡಗಳ ಜೊತೆ ಸ್ಪರ್ಧೆ ಮಾಡುತ್ತಿದ್ದೇವೆ. ಹೀಗಾಗಿಯೇ ಕ್ರಿಕೆಟ್ನ ಅಗ್ರ ಆಟಗಾರರಾದ ವಿರಾಟ್ ಕೊಹ್ಲಿ, ಬಾಬರ್ ಅಜಮ್ ಮತ್ತು ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ರಂತಹ ದಿಗ್ಗಜರ ವಿರುದ್ಧ ಕಣಕ್ಕಳಿಯುತ್ತಿದ್ದೇವೆ. ಸೂಪರ್ 12 ಹಂತದಲ್ಲೂ ತಂಡದ ತಂತ್ರದಲ್ಲಿ ಯಾವುದೇ ಬದಲಾವಣೆಯಿಲ್ಲ. ಎಲ್ಲರೂ ಕೂಡ ತಮ್ಮ ಕೌಶಲ್ಯವನ್ನು ಜಗತ್ತಿಗೆ ತೋರ್ಪಡಿಸಲು ಉತ್ಸುಕರಾಗಿದ್ದಾರೆ. ಹೀಗಾಗಿಯೇ ನಾವು ಅಗ್ರ ಆಟಗಾರರು ಹಾಗೂ ತಂಡಗಳೊಂದಿಗೆ ವಿಶ್ವಕಪ್ನಲ್ಲಿ ಸೆಣೆಸಲು ಬಂದಿದ್ದೇವೆ ಎಂದರು.
ಅರ್ಹತಾ ಸುತ್ತಿನಲ್ಲಿ ಮೂರಕ್ಕೆ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದೇವೆ. ಈ ಹಿಂದೆ ಬಾಂಗ್ಲಾದೇಶದಲ್ಲಿ ಟಾಪ್ 6ನೇ ಶ್ರೇಯಾಂಕದ ತಂಡವನ್ನು ಪರಾಭವಗೊಳಿಸಿದ್ದೆವು. ಏನಾದರೂ ಬದಲಾವಣೆ ಮಾಡಿಕೊಳ್ಳಬೇಕೆಂದಿದ್ದರೆ, ಅದು ಬಾಂಗ್ಲಾದೇಶ ತಂಡಕ್ಕಿದೆ. ಯಾಕೆಂದರೆ ಆ ತಂಡವು ಗ್ರೂಪ್ ಹಂತದಲ್ಲಿ ಗೆಲುವಿಗಾಗಿ ಕಷ್ಟಪಟ್ಟಿದ್ದೇವೆ ಎಂದ ಮಾರ್ಕ್ ವ್ಯಾಟ್, ಅಸೋಸಿಯೇಟ್ ಕ್ರಿಕೆಟ್ ಆಡುವುದು ಸುಲಭವಲ್ಲ, ಸದ್ಯ ನಮ್ಮ ಗೆಲುವಿನ ಪ್ರದರ್ಶನವನ್ನು ಮುಂದುವರಿಸುವತ್ತ ಗಮನ ಹರಿಸುವುದಾಗಿ ತಿಳಿಸಿದರು.