ವೇಲ್ಸ್(ಇಂಗ್ಲೆಂಡ್): ನ್ಯೂಜಿಲ್ಯಾಂಡ್ ತಂಡದ ಮಾಜಿ ನಾಯಕನಿಗೆ ಮಣೆ ಹಾಕಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬ್ರೆಂಡನ್ ಮೆಕಲಮ್ ಅವರನ್ನ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಇಸಿಬಿ ಖುದ್ದಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಆಸಿಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ 4-0 ಅಂತರದಿಂದ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಕೋಚ್ ಸ್ಥಾನದಿಂದ ಕ್ರಿಸ್ ಸಿಲ್ವರ್ವುಡ್ ಕೆಳಕ್ಕಿಳಿದಿದ್ದರು. ಇದರ ಬೆನ್ನಲ್ಲೇ ಮಧ್ಯಂತರ ಕೋಚ್ ಆಗಿ ಮಾಜಿ ಆಲ್ರೌಂಡರ್ ಪಾಲ್ ಕಾಲಿಂಗ್ವುಡ್ ಆಯ್ಕೆಯಾಗಿದ್ದರು. ಆದರೆ, ಇದೀಗ ಆ ಜಾಗಕ್ಕೆ ಮೆಕಲಮ್ ಆಯ್ಕೆಯಾಗಿದ್ದಾರೆ.
ಟೆಸ್ಟ್ ಸರಣಿಯಲ್ಲಿ ಹೀನಾಯ ಪ್ರದರ್ಶನದ ಬಳಿಕ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕತ್ವಕ್ಕೂ ಜೋ ರೂಟ್ ವಿದಾಯ ಹೇಳಿದ್ದಾರೆ. ಆ ಸ್ಥಾನಕ್ಕೆ ಈಗಾಗಲೇ ಆಲ್ರೌಂಡರ್ ಬೆನ್ ಸ್ಟೋಕ್ಸ್ ಆಯ್ಕೆಯಾಗಿದ್ದಾರೆ. ಮುಖ್ಯ ಕೋಚ್ ಸ್ಥಾನಕ್ಕೆ ಕಿವೀಸ್ ದಿಗ್ಗಜ ಬ್ರೆಂಡನ್ ಮೆಕಲಮ್ಗೆ ಕರೆತರಲಾಗಿದೆ.
ಇದನ್ನೂ ಓದಿ:CSK vs MI ಕಾದಾಟ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್
ಐಪಿಎಲ್ 2022ರಲ್ಲಿ ಬ್ರೆಂಡನ್ ಮೆಕಲಮ್ ಎರಡು ಬಾರಿಯ ಚಾಂಪಿಯನ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ತಂಡದ ಪರ 101 ಟೆಸ್ಟ್ ಪಂದ್ಯಗಳನ್ನಾಡಿರುವ ಬ್ರೆಂಡನ್ ಮೆಕಲಮ್ ಇದೀಗ ಮತ್ತೊಂದು ಹೊಸ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಜೂನ್ 2ರಿಂದ ಇಂಗ್ಲೆಂಡ್ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದ್ದು, ಈ ವೇಳೆಗೆ ಅವರು ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.