ಹೈದರಾಬಾದ್: ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್-2021ಗೆ ಎಲ್ಲಾ ತಂಡಗಳು ತಯಾರಿ ನಡೆಸುತ್ತಿವೆ. ಭಾರತ ತಂಡವೂ ಬಿಡುವಿಲ್ಲದೆ ಸರಣಿಗಳನ್ನು ಆಡುತ್ತಿದ್ದು, ಬಲಿಷ್ಠ ತಂಡದ ಜೊತೆ ಕಣಕ್ಕಿಳಿಯುವ ಆಲೋಚನೆಯಲ್ಲಿದೆ. ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದ್ದಾರೆ.
ಬ್ರಾಡ್ ಹಾಗ್ ತಾವು ಕಟ್ಟಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಓಪನರ್‌ಗಳಾಗಿ ಆಡಬೇಕು ಎಂದಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ-20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ ಮತ್ತು ರೋಹಿತ್ ಆರಂಭಿಕರಾಗಿ ಕಣಕ್ಕಿಳಿದು ಭಾರತ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದರು.
"ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡುವ ನನ್ನ ಆಯ್ಕೆಯ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿದ್ದಾರೆ. ಇದು ಶಿಖರ್ ಧವನ್ ಮೇಲೆ ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ ಆಗಬಹುದು. ಆದರೆ, ಭಾರತ ತಂಡದ ಮಧ್ಯಮ ಕ್ರಮಾಂಕ ಬಲಪಡಿಸಲು ಕೊಹ್ಲಿಯನ್ನ ಅಗ್ರ ಕ್ರಮಾಂಕದಲ್ಲಿ ಆಡಿಸಬೇಕಾದ ಅನಿವಾರ್ಯತೆ ಇದೆ" ಎಂದು ಹಾಗ್ ಖಾಸಗಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.