ಮ್ಯಾಂಚೆಸ್ಟರ್:ಪ್ರವಾಸಿ ಭಾರತ-ಇಂಗ್ಲೆಂಡ್ ನಡುವೆ ಇಂದಿನಿಂದ ಆರಂಭಗೊಳ್ಳಬೇಕಾಗಿದ್ದ 5ನೇ ಟೆಸ್ಟ್ ಪಂದ್ಯ ಕೋವಿಡ್ನಿಂದಾಗಿ ರದ್ಧುಗೊಂಡಿದೆ. ಫೈನಲ್ ಪಂದ್ಯ ಯಾವಾಗ ನಡೆಸಬೇಕು ಎಂಬುದರ ಕುರಿತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ಜೊತೆ ಸೇರಿ ಸಮಾಲೋಚನೆಯಲ್ಲಿ ತೊಡಗಿರುವ ಬಿಸಿಸಿಐ, ಪಂದ್ಯದ ಮರು ವೇಳಾಪಟ್ಟಿ ನಿಗದಿ ಮಾಡಲು ತಯಾರಿ ನಡೆಸುತ್ತಿದೆ.
ಟೀಂ ಇಂಡಿಯಾ ಕ್ಯಾಂಪ್ನಲ್ಲಿ ಕೋವಿಡ್ ಸೋಂಕಿತ ಪ್ರಕರಣ ಕಾಣಿಸಿಕೊಳ್ಳುತ್ತಿದ್ದಂತೆ ಫೈನಲ್ ಪಂದ್ಯವನ್ನು ಮುಂದೂಡಿಕೆ ಅಥವಾ ಅಮಾನತು ಮಾಡುವಂತೆ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಬಳಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮನವಿ ಮಾಡಿಕೊಂಡಿತ್ತು. ಆದರೆ ಇದಕ್ಕೆ ಬಿಸಿಸಿಐ ಹಿಂದೇಟು ಹಾಕಿ, ಅಗತ್ಯಬಿದ್ದರೆ ಪಂದ್ಯ ರದ್ಧುಗೊಳಿಸುವುದಾಗಿ ತಿಳಿಸಿತ್ತು. ಅದರಂತೆ ಪಂದ್ಯ ಇದೀಗ ರದ್ದು ಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಬಿಸಿಸಿಐ, ಫೈನಲ್ ಪಂದ್ಯದ ವೇಳಾಪಟ್ಟಿ ಮರು ನಿಗದಿ ಮಾಡುವಂತೆ ನಾವು ಇಸಿಬಿ ಬಳಿ ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಎರಡು ಮಂಡಳಿಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದೆ.