ಕರ್ನಾಟಕ

karnataka

ಬಾರ್ಡರ್ ಗವಾಸ್ಕರ್ ಟ್ರೋಫಿ: ಎರಡನೇ ಟೆಸ್ಟ್​ನಿಂದ ವಾರ್ನರ್​ ಹೊರಕ್ಕೆ

By

Published : Feb 18, 2023, 11:42 AM IST

ಗಾಯದ ಸಮಸ್ಯೆಯಿಂದ ಎರಡನೇ ಟೆಸ್ಟ್​ನಿಂದ ವಾರ್ನರ್​ ಹೊರಕ್ಕೆ - ವಾರ್ನರ್​ ಬದಲಿ ಆಟಗಾರನಾಗಿ ಮ್ಯಾಥ್ಯೂ ರೆನ್‌ಶಾ ಕಣಕ್ಕೆ - ಸಿರಾಜ್​ ಬೌನ್ಸ್​ ಬೌಲಿಂಗ್​ನಲ್ಲಿ ವಾರ್ನರ್​ ತೆಲೆಗೆ ಪೆಟ್ಟು

David Warner ruled out of 2nd Test due to concussion
ಎರಡನೇ ಟೆಸ್ಟ್​ನಿಂದ ವಾರ್ನರ್​ ಹೊರಕ್ಕೆ

ನವದೆಹಲಿ: ಆಸ್ಟ್ರೇಲಿಯಾದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರು ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಬಾರ್ಡರ್ - ಗವಾಸ್ಕರ್ ಟ್ರೋಫಿ ಟೆಸ್ಟ್‌ನಿಂದ ಹೊರಗುಳಿದಿದ್ದು, ಅವರ ಜಾಗದಲ್ಲಿ ಮ್ಯಾಥ್ಯೂ ರೆನ್‌ಶಾ ಕಣಕ್ಕಿಳಿಯಲಿದ್ದಾರೆ. ಸಿರಾಜ್​ ಅವರ ಬೌನ್ಸ್​ ಬೌಲಿಂಗ್​ನಲ್ಲಿ ಗಾಯಗೊಂಡ ಕಾರಣ ಹೊರಗುಳಿದಿರುವುದಾಗಿ ತಿಳಿದು ಬಂದಿದೆ.

ಎರಡನೇ ಟೆಸ್ಟ್​ನ ಮೊದಲ ದಿನ ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್​ ವಾರ್ನರ್​ 44 ಎಸೆತದಲ್ಲಿ 15 ರನ್​ಗೆ ಔಟ್​ ಆದರು. ಸಿರಾಜ್​ ಎಸೆದ 3, 7 ಮತ್ತು 9 ನೇ ಓವರ್​ನಲ್ಲಿ ಮೂರು ಬೌನ್ಸರ್​ಗಳು ವಾರ್ನರ್​ ಅವರನ್ನು ಕಾಡಿದವು. 9ನೇ ಓವರ್​ನ ಕೊನೆಯ ಬಾಲ್​ನಲ್ಲಿ ಬೌನ್ಸರ್​ ಡೇವಿಡ್​ ವಾರ್ನರ್​ ಅವರ ಕೈಗೆ ತಾಗಿ ಹೆಲ್ಮೆಟ್​ಗೆ ಬಡಿಯಿತು. ಇದರ ನಂತರ ಫಿಸಿಯೋ ಬಂದು ತಪಾಸಣೆ ಮಾಡಿದ ನಂತರ ಆಟ ಮುಂದುವರೆಸಿದರು. ಹೆಲ್ಮೆಟ್​ ಬದಲಾವಣೆ ಬೇಡ ಎಂದಿದ್ದರು. 15.2 ನೇ ಓವರ್​ನಲ್ಲಿ ಶಮಿ ಎಸೆತದಲ್ಲಿ ವಿಕೆಟ್​ ಒಪ್ಪಿಸಿದರು.

ಸಿರಾಜ್​ ಎಸೆತದಲ್ಲಿ ಕೈಗೆ ತಗುಲಿ ತಲೆಗೆ ಬಡಿದ ಬೌಲ್​ನಿಂದ ವಾರ್ನರ್​ಗೆ ಗಾಯವಾಗಿತ್ತು. ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮಗಳ ಪ್ರಕಾರ ಪಂದ್ಯದಲ್ಲಿ ನಡುವೆ ಗಾಯವಾದರೆ ಹನ್ನೊಂದರಲ್ಲಿ ಬದಲಾವಣೆ ಮಾಡುವುದಕ್ಕೆ ಅನುಮತಿಸಲಾಗಿದೆ. ಈ ನಿಮದನ್ವಯ ವಾರ್ನರ್​ ಬದಲಿ ಆಟಗಾರರಾಗಿ ಮ್ಯಾಥ್ಯೂ ರೆನ್‌ಶಾ ಆಡಲಿದ್ದಾರೆ.

ಕಳೆದ ವರ್ಷ ವಾರ್ನರ್ 11 ಟೆಸ್ಟ್‌ಗಳಲ್ಲಿ 20 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ ಕೇವಲ 571 ರನ್ ಗಳಿಸಿದ್ದರು. ಇದು ಅವರ 100 ನೇ ಟೆಸ್ಟ್‌ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ದ್ವಿಶತಕವನ್ನು ಒಳಗೊಂಡಿತ್ತು. ಈ ವರ್ಷ, ಅವರು ಮೂರು ಟೆಸ್ಟ್‌ಗಳಲ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 36 ರನ್ ಗಳಿಸಿದ್ದಾರೆ.

ರೆನ್​ಶಾ ಅವರು ಇತ್ತೀಚಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ರೆನ್​ಶಾ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆರಂಭಿಕರಾಗಿ ಪದಾರ್ಪಣೆ ಮಾಡಿದರು. ದೇಶಿಯ ಕ್ರಿಕೆಟ್​ನಲ್ಲಿ ರೆನ್​ಶಾ ಅವರು ಆರಂಭಿಕರಾಗಿ ಆಟ ಆಡುತ್ತಿದ್ದರು. ಮೊದಲ ದಿನದಾಟದ ನಂತರ ಉಸ್ಮಾನ್ ಖವಾಜಾ, ವಾರ್ನರ್ ಅವರಿಗೆ ತೋಳಿಗೆ ಮತ್ತು ನಂತರ ತಲೆಗೆ ಬಾಲ್​ ಬಡಿದು ಗಾಯವಾಗಿದೆ ಎಂದು ತಿಳಿಸಿದ್ದಾರೆ.

ಶುಕ್ರವಾರ ಟಾಸ್​ ಗೆದ್ದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯ ಬ್ಯಾಟಿಂಗ್​ ಆರಂಭಿಸಿತು ಶಮಿ, ಅಶ್ವಿನ್​ ಮತ್ತು ಜಡೇಜಾ ಬೌಲಿಂಗ್​ ದಾಳಿಗೆ ನಲುಗಿ 263 ರನ್‌ಗಳಿಗೆ ಆಲೌಟ್ ಆಯಿತು. ಭಾರತ ಮೊದಲ ಇನ್ನಿಂಗ್ಸ್​ ಆರಂಭಿಸಿದ್ದು, ಇಂದು 77 ಕ್ಕೆ 4 ವಿಕೆಟ್​ರ ಕಳೆದುಕೊಂಡು ಸಂಕಷ್ಟದಲ್ಲಿದೆ.

ನಿನ್ನೆ ಆಸಿಸ್​ ಉಸ್ಮಾನ್ ಖವಾಜಾ (81) ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ (72*) ಸಹಾಯದಿಂದ 263 ರನ್ ಗಳಿಸಿತು. ಭಾರತದ ಪರ ಶಮಿ 4 ಮತ್ತು ಸ್ವಿನ್​ ಜೋಡಿ ಅಶ್ವಿನ್​, ಜಡೇಜ ತಲಾ 3 ವಿಕೆಟ್​ ಪಡೆದರು. ನಿನ್ನೆ ದಿನದಾಟದ ಅಂತ್ಯಕ್ಕೆ ಭಾರತದ ವಿಕೆಟ್​ ನಷ್ಟ ಇಲ್ಲದೇ 21 ರನ್​ ಗಳಿಸಿತ್ತು.

ಎರಡನೇ ದಿನದಾಟದಲ್ಲಿ ಭಾರತ ಲಿಯಾನ್​ ದಾಳಿಗೆ ತತ್ತರಿಸಿದೆ. 32 ಓವರ್​ಗೆ 84 ರನ್​ ಗಳಿಸಿರುವ ಭಾರತ 4 ವಿಕೆಟ್​ ಕಳೆದುಕೊಂಡಿದೆ. 4 ವಿಕೆಟ್​ಗಳು ನಾಥನ್​ ಲಿಯಾನ್​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:"ಮೂರು ಇನ್ನಿಂಗ್ಸ್​ನಿಂದ ಫಾರ್ಮ್​ ಅಳೆಯಲಾಗದು": ವಾರ್ನರ್​ ಪರ ಖವಾಜಾ ಬ್ಯಾಟಿಂಗ್​

ABOUT THE AUTHOR

...view details