ನವದೆಹಲಿ: ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 263 ರನ್ಗಳಿಗೆ ಆಲೌಟಾಯಿತು. ಭಾರತದ ಬೌಲರ್ಗಳ ದಾಳಿಗೆ ಕುಸಿದ ಪ್ರವಾಸಿಗರ ತಂಡಕ್ಕೆ ಉಸ್ಮಾನ್ ಖವಾಜಾ (81) ಮತ್ತು ಪೀಟರ್ ಹ್ಯಾಂಡ್ಸ್ಕಾಂಬ್ (72 ಅಜೇಯ) ಆಸರೆಯಾದರು. ಇದರಿಂದಾಗಿ 78.4 ಓವರ್ಗಳಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಮತ್ತೊಂದೆಡೆ, ಭಾರತದ ವೇಗಿ ಮೊಹಮ್ಮದ್ ಶಮಿ ನಾಲ್ಕು ವಿಕೆಟ್ ಮತ್ತು ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಹಾಗು ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಕಬಳಿಸಿ ಕಾಂಗರೂ ಪಡೆಯನ್ನು ಕಾಡಿದರು.
ಆಸ್ಟ್ರೇಲಿಯಾ ಇನ್ನಿಂಗ್ಸ್: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭವಾದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆಸೀಸ್ ಕ್ಯಾಪ್ಟನ್ ನಿರ್ಧಾರದಿಂದ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಕ್ರೀಸ್ಗೆ ಬಂದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಮೊದಲ ವಿಕೆಟ್ಗೆ 50 ರನ್ಗಳ ಜೊತೆಯಾಟ ನೀಡಿದರು.
ಆದರೆ, ಈ ವೇಳೆ 44 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ 15 ರನ್ಗಳು ಗಳಿಸಿದ್ದ ವಾರ್ನರ್ ಅವರನ್ನು ವೇಗಿ ಮೊಹಮ್ಮದ್ ಶಮಿ ಪೆವಿಲಿಯನ್ಗೆ ಕಳುಹಿಸಿದರು. ನಂತರ ಮೂರನೇ ಕ್ರಮದಲ್ಲಿ ಬಂದ ವಿಶ್ವದ ನಂ.1 ಟೆಸ್ಟ್ ಬ್ಯಾಟರ್ ಮಾರ್ನಸ್ ಲ್ಯಾಬುಸ್ಚಾಗ್ನೆ, ಖವಾಜಾಗೆ ಒಳ್ಳೆಯ ಸಾಥ್ ನೀಡುವ ಮುನ್ಸೂಚನೆ ನೀಡಿದರು. ಆದರೆ, 25 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಮೇತ 18 ರನ್ ಬಾರಿಸಿದ್ದ ಲ್ಯಾಬುಸ್ಚಾಗ್ನೆ ಅವರನ್ನು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಲ್ಬಿ ಬಲೆಗೆ ಕೆಡವಿದರು. ಆಗ ಆಸೀಸ್ ತಂಡದ ಮೊತ್ತ 22 ಓವರ್ಗಳಲ್ಲಿ 91 ರನ್ಗಳಾಗಿತ್ತು.
ಇದರ ಬೆನ್ನಲ್ಲೇ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಅಶ್ವಿನ್ ಮತ್ತೊಬ್ಬ ದಾಂಡಿಗ ಸ್ಟೀವ್ ಸ್ಮಿತ್ ಅವರನ್ನು ಶೂನ್ಯಕ್ಕೆ ಓಟ್ ಮಾಡಿದರು. ಈ ಮೂಲಕ ಎದುರಾಳಿ ತಂಡಕ್ಕೆ ಅಶ್ವಿನ್ ಮತ್ತೆ ಶಾಕ್ ಕೊಟ್ಟರು. ಅಲ್ಲದೇ, ಪ್ರಮುಖ ಎರಡು ವಿಕೆಟ್ಗಳನ್ನು ಉರುಳಿಸಿ ಊಟದ ವಿರಾಮದ ವೇಳೆಗೆ ಭಾರತ ತಂಡಕ್ಕೆ ಮೇಲುಗೈ ಸಾಧಿಸಲು ನೆರವಾದರು. ಬಳಿಕ ಆರಂಭಿಕ ಉಸ್ಮಾನ್ ಖವಾಜಾ ಹಾಗೂ ಟ್ರಾವಿಸ್ ಹೆಡ್ ಆಟ ಮುಂದುವರೆಸಿದರು. ಆದರೆ, 30 ಎಸತೆಗಳಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ನೊಂದಿಗೆ 12 ರನ್ ಗಳಿಸಿದ್ದ ಟ್ರಾವಿಸ್ ಹೆಡ್ ಅವರನ್ನು ಶಮಿ ಔಟ್ ಮಾಡಿದರು.