ನವದೆಹಲಿ:ಭಾರತೀಯ ಆಟಗಾರರು ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಭಾಗವಹಿಸುವ ಸಂಬಂಧ ಭಾರತೀಯ ಕ್ರಿಕೆಟ್ ಮಂಡಳಿ ಬಿಸಿಸಿಐ ಯಾವುದೇ ನೀತಿಗಳನ್ನು ರೂಪಿಸಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಎಂಎಸ್ ಧೋನಿ, ಕ್ರಿಕೆಟ್ ಸೌತ್ ಆಫ್ರಿಕಾ (CSA) T20 ಲೀಗ್‌ನ ಉದ್ಘಾಟನಾ ಆವೃತ್ತಿಗಾಗಿ ಅವರ ಫ್ರಾಂಚೈಸಿ ಮಾಲೀಕತ್ವದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್‌ಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬ ವದಂತಿಗಳಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಈ ಹೇಳಿಕೆ ನೀಡಿದೆ.
ಭಾರತೀಯ ಆಟಗಾರರು ಯಾವುದೇ ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಭಾಗವಹಿಸಲು ಮಂಡಳಿಯು ತನ್ನ ಆಟಗಾರರಿಗೆ ಅವಕಾಶ ನೀಡುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇದೇ ವೇಳೆ ತಿಳಿಸಿದ್ದಾರೆ.
ನಾವು ನಮ್ಮ ಆಟಗಾರರನ್ನು ವಿದೇಶದಲ್ಲಿರುವ ಯಾವುದೇ ಕ್ರಿಕೆಟ್ ಲೀಗ್‌ಗೆ ಒದಗಿಸುವುದಿಲ್ಲ. ಈ ಬಗ್ಗೆ ನಾವು ಸ್ಪಷ್ಟವಾದ ನೀತಿಯನ್ನು ಹೊಂದಿದ್ದೇವೆ. ಇಂಡಿಯನ್ ಪ್ರೀಮಿಯರ್ ಲೀಗ್(IPL) ಸ್ವತಃ ಒಂದು ದೊಡ್ಡ ಲೀಗ್ ಮತ್ತು ನಮ್ಮ ಯಾವುದೇ ಆಟಗಾರರನ್ನು ಯಾವುದೇ ವಿದೇಶಿ ಲೀಗ್ನೊಂದಿಗೆ ಆಡಲು ನಾವು ಅನುಮತಿಸುವುದಿಲ್ಲ ಎಂದು ಶುಕ್ಲಾ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ಮತ್ತು ಯುಎಇ ಕ್ರಿಕೆಟ್ ಮಂಡಳಿಯು ತಮ್ಮ T20 ಲೀಗ್ ಘೋಷಿಸಿದ್ದು, ಮುಂದಿನ ವರ್ಷ ಪ್ರಾರಂಭವಾಗಲಿದೆ. ಐಪಿಎಲ್ ಫ್ರಾಂಚೈಸಿಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಈ ಎರಡು ಲೀಗ್‌ಗಳಲ್ಲಿ ತಂಡಗಳನ್ನು ಖರೀದಿಸಿವೆ. ಈ ಎರಡು ಲೀಗ್‌ಗಳಲ್ಲಿ ಭಾರತೀಯ ಆಟಗಾರರು ಸಹ ಕಾಣಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಟಗಾರರು ಮಂಡಳಿ ಮತ್ತು ಐಪಿಎಲ್‌ಗೆ ತಮ್ಮ ಬದ್ಧತೆ ತೋರಿಸಬೇಕೆಂದು ಬಿಸಿಸಿಐ ಬಯಸುತ್ತಿದೆ.
ಏಪ್ರಿಲ್‌ನಲ್ಲಿ ಕ್ರಿಕೆಟ್ ಸೌತ್ ಆಫ್ರಿಕಾ (CSA) ಮತ್ತು ಸೂಪರ್‌ಸ್ಪೋರ್ಟ್ ಟಿವಿ ಜನವರಿ 2023 ರಿಂದ ಪ್ರಾರಂಭವಾಗುವ ಆರು ಫ್ರಾಂಚೈಸಿಗಳನ್ನು ಒಳಗೊಂಡ ಟಿ 20 ಸ್ಪರ್ಧೆಯನ್ನು ಘೋಷಿಸಿದೆ. ಮತ್ತೊಂದು ಕಡೆ, ಜುಲೈನಲ್ಲಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಇಂಟರ್ನ್ಯಾಷನಲ್ ಲೀಗ್ T20 (ILT20) ಲೀಗ್ ಅನ್ನು ಜನವರಿ 6 ರಿಂದ ಫೆಬ್ರವರಿ 12, 2023 ರವರೆಗೆ ಆಯೋಜಿಸಲಾಗಿದೆ ಎಂದು ಘೋಷಿಸಿದೆ.
ಇದನ್ನು ಓದಿ:2025ರ ಮಹಿಳಾ ವಿಶ್ವಕಪ್‌ಗೆ ಭಾರತ ಆತಿಥ್ಯ: 301 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ