ಕರ್ನಾಟಕ

karnataka

ETV Bharat / sports

ಹಾಲಿ ಚಾಂಪಿಯನ್​ ಕರ್ನಾಟಕಕ್ಕೆ ಶಾಕ್​.. ಅಂಧ ಮಹಿಳೆಯರ ಟಿ20 ಕ್ರಿಕೆಟ್​ಗೆ ಒಡಿಶಾ ಚಾಂಪಿಯನ್ - ಕರ್ನಾಟಕ ಮಹಿಳಾ ಅಂಧರಿಗೆ ಶಾಕ್​

ಅಂಧ ಮಹಿಳೆಯರ ಟಿ20 ಕ್ರಿಕೆಟ್ - ಒಡಿಶಾ ತಂಡ ಹೊಸ ಚಾಂಪಿಯನ್​- ಕರ್ನಾಟಕ ಸೋಲಿಸಿ ಪಟ್ಟ ಗಳಿಸಿದ ಒಡಿಶಾ - ಆನೇಕಲ್​ನ ಸ್ಪೋರ್ಟ್ಸ್ ಗ್ರೀನ್ ಪಾರ್ಕ್​ನಲ್ಲಿ ನಡೆದ ಫೈನಲ್​ ಪಂದ್ಯ

blind-womens-t20-cricket-result
ಮಹಿಳಾ ಅಂಧರ ಟಿ20 ಕ್ರಿಕೆಟ್​ಗೆ ಒಡಿಶಾ ಹೊಸ ಬಾಸ್​

By

Published : Jan 14, 2023, 8:00 AM IST

Updated : Jan 14, 2023, 8:55 AM IST

ಅಂಧ ಮಹಿಳೆಯರ ಟಿ20 ಕ್ರಿಕೆಟ್

ಆನೇಕಲ್​(ಬೆಂಗಳೂರು ಗ್ರಾಮಾಂತರ):ಇಂಡಸ್ ಇಂಡ್ ಬ್ಯಾಂಕ್ ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಒಡಿಶಾ ತಂಡದ ವಿರುದ್ಧ 8 ವಿಕೆಟ್​​ಗಳಿಂದ ಸೋಲೊಪ್ಪಿಕೊಂಡಿತು. ಹಾಲಿ ಚಾಂಪಿಯನ್ ತಂಡವನ್ನು ಸೋಲಿಸಿದ ಒಡಿಶಾ ಹೊಸ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಆನೇಕಲ್ ತಾಲೂಕಿನ ಚೊಕ್ಕಸಂದ್ರದ 'ಸ್ಪೋರ್ಟ್ಸ್ ಗ್ರೀನ್ ಪಾರ್ಕ್' ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 16.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ನಷ್ಟಕ್ಕೆ ಕೇವಲ 80 ರನ್​ಗಳನ್ನು ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ಒಡಿಶಾ 12.2 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿ ಪ್ರಶಸ್ತಿಗೆ ಪಾತ್ರವಾಯಿತು.

ಒಡಿಶಾ ತಂಡದ ನಾಯಕಿ ಫುಲ ಸೊರೇನ್ (ಔಟಾಗದೇ 34) ಮತ್ತು ಬಸಂತಿ ಹನ್ಸ್ದಾ(ಔಟಾಗದೇ 25) ರನ್ ಗಳಿಸಿ ಒಡಿಶಾ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಇದಕ್ಕೂ ಮುನ್ನ ಕಳೆದ ಬಾರಿಯ ಚಾಂಪಿಯನ್ ಕರ್ನಾಟಕ, ಪ್ರವಾಸಿ ತಂಡದ ಅತ್ಯುತ್ತಮ ಕ್ಷೇತ್ರ ರಕ್ಷಣೆ ಮುಂದೆ ಮಂಕಾಯಿತು. ಬ್ಯಾಟರ್​ಗಳ ಸಮನ್ವಯತೆ ಕೊರತೆಯಿಂದ ಕೆಲ ಬ್ಯಾಟರ್​​ಗಳನ್ನು ರನ್ ಔಟ್ ಬಲೆಗೆ ಬಿದ್ದರೆ, ಇನ್ನು ಕೆಲವರು ಎರಡಂಕಿ ಮೊತ್ತ ಮುಟ್ಟಲು ಸಾಧ್ಯವಾಗಲಿಲ್ಲ. ಟೂರ್ನಿಯ ಆರಂಭದಿಂದಲೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ಗಂಗಾ ಕೇವಲ 3 ರನ್​​ಗಳಿಗೆ ಔಟಾಗಿದ್ದು, ಕರ್ನಾಟಕ ತಂಡಕ್ಕೆ ದುಬಾರಿಯಾಯಿತು. ವರ್ಷ (18) ಮತ್ತು ಬಿ2 ರೇಣುಕಾ ರಜಪತ್ (12) ಹೊರತುಪಡಿಸಿ ಬೇರೆ ಯಾರು ಎರಡಂಕಿ ಮೊತ್ತ ಮುಟ್ಟಲಿಲ್ಲ. ಹೀಗಾಗಿ ಆತಿಥೇಯ ತಂಡ ಸಾಧಾರಣ ಮೊತ್ತಕ್ಕೆ ಕುಸಿಯಿತು. ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಬಸಂತಿ ಹನ್ಸ್ದಾಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಆಟಗಾರ್ತಿಯರಿಗೆ ನೇಪಾಳದಲ್ಲಿ ತರಬೇತಿ:ಪಂದ್ಯದ ಬಳಿಕ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇಂಡಿಯಾದ ಸಂಸ್ಥಾಪಕ ಅಧ್ಯಕ್ಷ ಡಾ.ಮಹಾಂತೇಶ್ ಮಾತನಾಡಿ, ಇದು ಮೂರನೇ ಅಂಧ ಹೆಣ್ಣು ಮಕ್ಕಳ ಕ್ರಿಕೆಟ್ ಪಂದ್ಯಾವಳಿ. 16 ರಾಜ್ಯಗಳಿಂದ ತಂಡಗಳು ಬಂದಿವೆ. ಐದು ದಿನ ನಡೆದ ಟೂರ್ನಿಯಲ್ಲಿ ಒಡಿಶಾ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ವಿಜೇತ ಒಡಿಶಾ ತಂಡವನ್ನು ಅಭಿನಂದಿಸುವೆ. ಇಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ನೇಪಾಳದಲ್ಲಿ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಕೊಡಿಸಲಾಗುವುದು. ಆಗಸ್ಟ್​ನಲ್ಲಿ ನಡೆಯುವ ವಿಶ್ವ ಅಂಧರ ಮಹಿಳಾ ಕ್ರಿಕೆಟ್ ಟೂರ್ನಿಗೆ ಭಾರತ ಮಹಿಳಾ ತಂಡವನ್ನು ಹುರಿಗೊಳಿಸಲಾಗುವುದು. ವಿದೇಶದಲ್ಲಿ ಭಾರತದ ವಿಜಯ ಪತಾಕೆ ಹಾರಿಸುವ ಎಲ್ಲ ಪ್ರಯತ್ನವನ್ನು ಮಾಡಲಾಗುವುದು ಎಂದರು.

ಫಲಿತಾಂಶ ನಿರಾಸೆ ತಂದಿದೆ:ಕರ್ನಾಟಕ ತಂಡದ ನಾಯಕಿ ವರ್ಷಾ ಮಾತನಾಡಿ, ನಾಲ್ಕು ತಂಡಗಳ ವಿರುದ್ಧ ಗೆಲುವು ಕಂಡಿದ್ದೇವೆ. ಫೈನಲ್​ನಲ್ಲಿ ಸೋತಿದ್ದು ನಿರಾಸೆ ತಂದಿದೆ. ರನ್ನರ್ ಅಪ್ ಸಾಧನೆ ತೋರಿದ್ದೇವೆ. ತಂಡದ ಬ್ಯಾಟಿಂಗ್ ವಿಭಾಗ ಸುಧಾರಿಸಬೇಕಿದೆ. ಉತ್ತಮ ಕ್ಷೇತ್ರರಕ್ಷಣೆ ಮಾಡಿದ ತೃಪ್ತಿಯಿದೆ. ಮುಂದಿನ ದಿನಗಳಲ್ಲಿ ಉತ್ತಮ ತರಬೇತಿ ಪಡೆದು ಇನ್ನಷ್ಟು ಸಾಧನೆ ಮಾಡುತ್ತೇವೆ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಯುನಿಸಿಸ್ ಇಂಡಿಯಾದ ಸಿಎಸ್ಆರ್ ಕೌನ್ಸಿಲ್​ನ ಲೀಡ್ ಸುಮಿತಾ ದತ್ತಾ, ಪಾರ್ಕ್ ಮೆಡ್ನ ಎಂ.ಡಿ.ಡಾ. ಸುಧೀರ್ ರೆಡ್ಡಿ, ಸಮರ್ಥನಂ ಟ್ರಸ್ಟಿ ವಸಂತಿ ಸವಣೂರು, ಬೂಸೇಗೌಡ ಎಸ್, ಉದಯ್, ಸಿಎಬಿಐನ ಮಹಿಳಾ ರಾಷ್ಟ್ರೀಯ ಅಧ್ಯಕ್ಷೆ ಯೋಗೇಶ್ ತನೇಜಾ, ಪ್ರಧಾನ ಕಾರ್ಯದರ್ಶಿ ಇ.ಜಾನ್ ಡೇವಿಡ್ ಉಪಸ್ಥಿತರಿದ್ದರು.

ಇನ್ನು ಪಂದ್ಯದಲ್ಲಿ ಒಡಿಶಾ ನಾಯಕಿ ಫುಲ ಸೊರೇನ್ ಸರಣಿ ಶ್ರೇಷ್ಠ ಪಶಸ್ತಿ ಪಡೆದರೆ, ಕನಾಟಕದ ವರ್ಷಾ, ಗಂಗಾ, ಮಧ್ಯಪ್ರದೇಶದ ಸುಶಾಮಾ ಪಟೇಲ್ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು.

ಓದಿ:ಹಾರ್ದಿಕ್​ಗೆ ಟಿ20 ನಾಯಕತ್ವ ಮುಂದುವರಿಕೆ: ನ್ಯೂಜಿಲ್ಯಾಂಡ್​ - ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ​ ಪ್ರಕಟ

Last Updated : Jan 14, 2023, 8:55 AM IST

ABOUT THE AUTHOR

...view details