ಸೌತಾಂಪ್ಟನ್ (ಇಂಗ್ಲೆಂಡ್): ಇಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿರುವುದು ಗೊತ್ತಿರುವ ಸಂಗತಿ. ಆದ್ರೆ ಇದೇ ಪಂದ್ಯದಲ್ಲಿ ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರು ಪಡೆದ ವಿಕೆಟ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದಿಲ್ಲದೇ ವೈರಲ್ ಆಗ್ತಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಿಗೆ 198 ರನ್ ಕಲೆ ಹಾಕುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಬೃಹತ್ ಗುರಿ ನೀಡಿತು. ಈ ಸವಾಲಿನ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಭಾರತದ ವೇಗಿಗಳು ಆಘಾತದ ಮೇಲೆ ಆಘಾತವನ್ನೇ ನೀಡಿದರು. ಆರಂಭಿಕರಾಗಿ ಜಾಸನ್ ರಾಯ್ ಮತ್ತು ಜೋಸ್ ಬಟ್ಲರ್ ಕಣಕ್ಕಿಳಿದಿದ್ದರು. ಇತ್ತ ಭುವನೇಶ್ವರ್ ಕುಮಾರ್ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದರು. ಮೊದಲ ನಾಲ್ಕು ಎಸೆತಗಳನ್ನು ಎದುರಿಸಿದ ಜಾಸನ್ ರಾಯ್ 1 ರನ್ ಕಲೆ ಹಾಕಿ ಬಟ್ಲರ್ಗೆ ಬ್ಯಾಟಿಂಗ್ ನೀಡಿದರು. ಆದ್ರೆ, ಬಟ್ಲರ್ ಭುವಿ ಎಸೆದ ಅದ್ಭುತ ಇನ್ಸ್‌ವಿಂಗರ್‌ಗೆ ಕ್ಲೀನ್ ಬೌಲ್ಡ್ ಆದರು.