ಮೌಂಟ್ ಮೌಂಗನುಯಿ (ನ್ಯೂಜಿಲ್ಯಾಂಡ್ ):ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಮತ್ತು ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ ಹೊಸ ದಾಖಲೆ ನಿರ್ಮಿಸಿದ್ದಾರೆ. ತಮ್ಮ ಕೋಚ್ ಎದುರೇ ಅವರ ದಾಖಲೆ ಮುರಿದು ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್ನ ಬ್ರೆಂಡನ್ ಮೆಕಲಮ್ ಅವರು ಸದ್ಯ ಇಂಗ್ಲೆಂಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೆಕಲಮ್ ಟೆಸ್ಟ್ನಲ್ಲಿ ಗಳಿಸಿದ್ದ 107 ಸಿಕ್ಸ್ನ ದಾಖಲೆಯನ್ನು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಮುರಿದ್ದಿದ್ದಾರೆ. ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ನಡುವೆ ಪಂದ್ಯ ನಡೆಯುತ್ತಿದ್ದು, ಮ್ಯಾಚ್ನ ಎರಡನೇ ಇನ್ನಿಂಗ್ಸ್ನಲ್ಲಿ ಸ್ಟೋಕ್ಸ್ 2 ಸಿಕ್ಸ್ ಬಾರಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ. ಮೂರನೇ ದಿನದಾಟದಲ್ಲಿ ಪಂದ್ಯದಲ್ಲಿ ಸ್ಕಾಟ್ ಕುಗ್ಗೆಲೆಯ್ನ್ ಬೌಲಿಂಗ್ನಲ್ಲಿ ಫೈನ್ ಲೆಗ್ ಕಡೆಗೆ ಸಿಕ್ಸ್ ಹೊಡೆಯುವ ಮೂಲಕ ಈ ದಾಖಲೆ ಬರೆದರು. ಈ ವೇಳೆ, ಇಂಗ್ಲೆಂಡ್ ಕೋಚ್ ಆಗಿರುವ ಬ್ರೆಂಡನ್ ಮೆಕಲಮ್ ಚಪ್ಪಾಳೆ ತಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು. ಸ್ಟೋಕ್ಸ್ 33 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ನಿಂದ 31 ರನ್ ಗಳಿಸಿದರು.
ಇದುವರೆಗೂ 90 ಟೆಸ್ಟ್ನಲ್ಲಿ 169 ಇನ್ನಿಂಗ್ಸ್ ಆಡಿರುವ ಸ್ಟೋಕ್ಸ್ 109 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. 36.00 ಸರಾಸರಿಯಲ್ಲಿ 12 ಶತಕ ಮತ್ತು 28 ಅರ್ಧಶತಕಗಳೊಂದಿಗೆ ಒಟ್ಟು 5,652 ರನ್ ಗಳಿಸಿದ್ದಾರೆ. ಟೆಸ್ಟ್ ಮಾಡರಿಯಲ್ಲಿ 258 ಅವರ ಅತ್ಯುತ್ತಮ ಸ್ಕೋರ್ ಆಗಿದೆ. ನ್ಯೂಜಿಲ್ಯಾಂಡ್ನ ಬ್ರೆಂಡನ್ ಮೆಕಲಮ್ 101 ಟೆಸ್ಟ್‌ಗಳಲ್ಲಿ 107 ಸಿಕ್ಸರ್‌ಗಳನ್ನು ಗಳಿಸಿ ಟೆಸ್ಟ್ನಲ್ಲಿ ಅತೀ ಹೆಚ್ಚು ಸಿಕ್ಸ್ ಗಳಿಸಿದ ದಾಖಲೆ ಹೊಂದಿದ್ದರು. ಮೆಕಲಮ್ 38.64 ರ ಸರಾಸರಿಯಲ್ಲಿ 6,453 ರನ್ ಗಳಿಸಿದ್ದು, 302 ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಟೆಸ್ಟ್ನಲ್ಲಿ 12 ಶತಕಗಳು ಮತ್ತು 31 ಅರ್ಧಶತಕಗಳನ್ನು ಮೆಕಲಮ್ ಗಳಿಸಿದ್ದಾರೆ.