ಲಂಡನ್:ವಿಶ್ವಕಪ್ ಹಿನ್ನೆಲೆಯಲ್ಲಿ ಏಕದಿನ ನಿವೃತ್ತಿಯಿಂದ ಹೊರ ಬಂದಿರುವ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಏಕದಿನದಲ್ಲಿ 182 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ರನ್ ದಾಖಲಿಸಿದರು. ಜೊತೆಗೆ ಈ ಮಾದರಿಯಲ್ಲಿ 3 ಸಾವಿರ ರನ್ ಗಳಿಸಿದರು.
ಟೆಸ್ಟ್ ತಂಡದ ನಾಯಕನಾಗಿರುವ ಸ್ಟೋಕ್ಸ್ ಏಕದಿನ ತಂಡಕ್ಕೆ ನಿವೃತ್ತಿ ಘೋಷಿಸಿದ್ದರು. ವಿಶ್ವಕಪ್ ಮುಂದಿರುವ ಕಾರಣ ತಂಡ ನಿವೃತ್ತಿ ಹಿಂಪಡೆಯಲು ಕೋರಿತ್ತು. ಅದರಂತೆ ಮತ್ತೆ ಏಕದಿನ ತಂಡಕ್ಕೆ ವಾಪಸ್ ಆಗಿರುವ ಎಡಗೈ ಬ್ಯಾಟರ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ತಾವು ವಿಶ್ವಕಪ್ಗೆ ರೆಡಿ ಎಂದು ಸಂದೇಶ ರವಾನಿಸಿದ್ದಾರೆ.
ಇಂಗ್ಲೆಂಡ್ ಪರ ಅತ್ಯಧಿಕ:ಕಿವೀಸ್ ವಿರುದ್ಧದ 3ನೇ ಏಕದಿನದಲ್ಲಿ 15 ಬೌಂಡರಿ 9 ಸಿಕ್ಸರ್ಗಳ ಸಮೇತ 182 ರನ್ ಗಳಿಸಿದರು ಸ್ಟೋಕ್ಸ್ ಇಂಗ್ಲೆಂಡ್ ಪರವಾಗಿ ಗರಿಷ್ಠ ರನ್ ಗಳಿಸಿದ ಮೊದಲಿಗ ಎಂಬ ದಾಖಲೆ ಬರೆದರು. ಇದಕ್ಕೂ ಮೊದಲು ಆರಂಭಿಕ ಬ್ಯಾಟರ್ ಜಾಸನ್ ರಾಯ್ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 180 ರನ್ ಗಳಿಸಿದ್ದರು. ಇದು ಈವರೆಗಿನ ಅತ್ಯಧಿಕ ರನ್ ಆಗಿತ್ತು. ಇದರ ಜೊತೆಗೆ 2016 ರಲ್ಲಿ ಪಾಕಿಸ್ತಾನ ವಿರುದ್ಧ ಅಲೆಕ್ಸ್ ಹೇಲ್ಸ್ 171, 1993 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ರಾಬಿನ್ ಸ್ಮಿತ್ 167, 2022 ರಲ್ಲಿ ನಾಯಕ ಜೋಸ್ ಬಟ್ಲರ್ ನೆದರ್ಲ್ಯಾಂಡ್ಸ್ ವಿರುದ್ಧ 162 ರನ್ ಗಳಿಸಿದ್ದರು.