ಮುಂಬೈ: ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳೆಗಿಳಿಸಿದ ವಿಚಾರ ದಿನದಿಂದ ದಿನಕ್ಕೆ ದೊಡ್ಡ ವಿವಾದವನ್ನುಂಟು ಮಾಡುತ್ತಿದೆ. ಅದರಲ್ಲೂ ಬುಧವಾರ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ಮಾಡಿದ ನಂತರ ಈ ವಿವಾದ ಮತ್ತಷ್ಟು ಹೆಚ್ಚಾಗಿದ್ದು, ಇದನ್ನು ಬಿಸಿಸಿಐ ಅಧ್ಯಕ್ಷ ಮಂಡಳಿ ಇದನ್ನು ಸರಿಯಾದ ರೀತಿ ಡೀಲ್ ಮಾಡಿಕೊಳ್ಳುತ್ತದೆ ಎಂದು ಗಂಗೂಲಿ ಗುರುವಾರ ಹೇಳಿದ್ದಾರೆ.
ಕೊಹ್ಲಿ ಸುದ್ದಿಗೋಷ್ಠಿ ಬಗ್ಗೆ ಪ್ರತಿಕ್ರಿಯೆ ಕೇಳಿದಾದ, ಗಂಗೂಲಿ, ಇದನ್ನು ಎಳೆದುಕೊಂಡು ಹೋಗುವುದಕ್ಕೆ ಇಷ್ಟಪಡದೇ, ಇದರ ಬಗ್ಗೆ ನಾನೇನು ಹೇಳುವುದಿಲ್ಲ. ಬಿಸಿಸಿಐ ಆಡಳಿತ ಮಂಡಳಿ ಇದನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಏನಿದು ವಿವಾದ?
ಕಳೆದ ವಾರ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಇದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಗಂಗೂಲಿ, ಕೊಹ್ಲಿ ಟಿ-20 ನಾಯಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗ ನಾನು ವೈಯಕ್ತಿಕವಾಗಿ ಕರೆಮಾಡಿ ಟಿ-20 ನಾಯಕತ್ವ ಬಿಡಬೇಡಿ ಎಂದು ಮನವಿ ಮಾಡಿದ್ದೆ.
ಆದರೆ, ಅವರು ಕೆಲಸದೊತ್ತಡದಿಂದ ನನ್ನ ಮನವಿಯನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಆಯ್ಕೆ ಸಮಿತಿ ಆಯ್ಕೆ ಸಮಿತಿಗೆ ಸೀಮಿತ ಓವರ್ಗಳ ತಂಡಗಳಿಗೆ ಇಬ್ಬರು ನಾಯಕರ ಅಗತ್ಯವಿಲ್ಲ ಎಂದು ಭಾವಿಸಿ, ಈಗಾಗಲೇ ಟಿ-20 ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ಗೆ ಏಕದಿನ ತಂಡದ ನಾಯಕತ್ವವನ್ನು ನೀಡಲಾಗಿತ್ತು ಎಂದು ತಿಳಿಸಿದ್ದರು.
ಗಂಗೂಲಿ ಕರೆ ಮಾಡಿರಲಿಲ್ಲ ಎಂದಿದ್ದ ಕೊಹ್ಲಿ
ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ, ಮುಂದಿನ ಪ್ರವಾಸದ ಟೆಸ್ಟ್ ತಂಡವನ್ನು ಆಯ್ಕೆ ಮಾಡಲು ನಡೆದ ಸಭೆಯಲ್ಲಿ ನನ್ನನ್ನು ಆಯ್ಕೆಗಾರರು ನೀವು, ಏಕದಿನ ತಂಡಕ್ಕೆ ನಾಯಕರಾಗಿರುವುದಿಲ್ಲ ಎಂದು ತಿಳಿಸಿದರು. ನಾನು ಅದಕ್ಕೆ ಸರಿ, ಒಳ್ಳೆದಾಯ್ತು ಎಂದು ಉತ್ತರಿಸಿದ್ದೆ. ಇದೆಲ್ಲಾ ತಂಡವನ್ನು ಆಯ್ಕೆ ಮಾಡುವ 90 ನಿಮಿಷಗಳ ಹಿಂದೆ ನಡೆಯಿತು.
ಆದರೆ,ಈ ಹಿಂದೆ ಬಿಸಿಸಿಐ ಅಧಿಕಾರಿ(ಗಂಗೂಲಿ)ಗಳು ಹೇಳಿರುವಂತೆ ನಾನು ಟಿ-20 ನಾಯಕತ್ವ ತ್ಯಜಿಸಿದ ವೇಳೆ ನನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಯಾರೊಬ್ಬರು ಹೇಳಿರಲಿಲ್ಲ. ಅಲ್ಲದೇ ಅವರೆಲ್ಲರೂ ನನ್ನ ನಿರ್ಧಾರವನ್ನು ಉತ್ತಮವಾಗಿ ಸ್ವೀಕರಿಸಿದ್ದರು. ನಾನು ಕೂಡ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ನಾಯಕನಾಗಿ ಮುಂದುವರಿಯುತ್ತೇನೆ ಎಂದು ನನ್ನದೇ ಆದ ರೀತಿಯಲ್ಲಿ ಅವರಿಗೆ ಮನವರಿಕೆ ಮಾಡಿದ್ದೆ.
ಅವರು ನಾನು ಯಾವುದೇ ವಿಶ್ವಕಪ್ ಗೆದ್ದಿಲ್ಲದ ಕಾರಣ ನಾಯಕತ್ವದಿಂದ ಕೆಳಗಿಳಿಸಿದ್ದಾರೆ ಎನ್ನುವುದನ್ನ ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿ ಗಂಗೂಲಿ ಹೇಳಿಕೆಯನ್ನು ಅಲ್ಲಗಳೆದಿದ್ದರು.
ಈ ಸುದ್ದಿಗೋಷ್ಠಿ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕೆಲವರು ಬಿಸಿಸಿಐ ವಿರುದ್ಧ ಇದ್ದರೆ, ಕೆಲವರು ಕೊಹ್ಲಿ ಮಂಡಳಿಯ ವಿಷಯವನ್ನು ಹೊರಗೆ ಚರ್ಚೆ ಮಾಡಿದ್ದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಟೆಸ್ಟ್ ತಂಡದ ಆಯ್ಕೆಯ ಒಂದು ಗಂಟೆಗೆ ಮುಂಚೆ ನಾನು ODI ನಾಯಕನಲ್ಲ ಎಂದು ತಿಳಿಸಿದ್ರು: ವಿರಾಟ್ ಕೊಹ್ಲಿ