ವಾರಣಾಸಿ (ಉತ್ತರ ಪ್ರದೇಶ):ಇಲ್ಲಿನ ಗಂಜಾರಿ ಗ್ರಾಮಕ್ಕೆ ಭೇಟಿ ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮಾಡಲು ಉದ್ದೇಶಿಸಿರುವ ಜಾಗವನ್ನು ಪರಿಶೀಲಿಸಿದರು. ತಂಡದೊಂದಿಗೆ ಶುಕ್ಲಾ ಅವರು ಸ್ವಾಧೀನ ಪಡಿಸಿಕೊಳ್ಳಲಾಗಿರುವ 32 ಎಕರೆ ಭೂಮಿಯನ್ನು ಪರಿಶೀಲಿಸಿದರು.
ತಂಡದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಉಪಸ್ಥಿತರಿದ್ದರು. ಭೇಟಿಯ ವರದಿಯನ್ವಯ ಬಿಸಿಸಿಐ ಡಿಪಿಆರ್ ಮತ್ತು ಸ್ಟೇಡಿಯಂ ವಿನ್ಯಾಸವನ್ನು ಸಿದ್ಧಪಡಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ಶಿಲಾನ್ಯಾಸ ಮಾಡುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಕಾರ್ಯದರ್ಶಿ ಜಯ್ ಶಾ ಎರಡು ದಿನಗಳ ಪ್ರವಾಸದಲ್ಲಿ ವಾರಣಾಸಿಗೆ ಭೇಟಿ ನೀಡಿದ್ದಾರೆ.
ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ವೈದ್ಯಕೀಯ ಸೆಮಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲು ವಾರಣಾಸಿಗೆ ಭೇಟಿ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ವೈದ್ಯಕೀಯ ಸೆಮಿನಾರ್ ಕಾರ್ಯಕ್ರಮವನ್ನು ರುದ್ರಾಕ್ಷಿ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಭೇಟಿ ನೀಡಲಿರುವ ವೇಳೆ ವಿವಿಧ 20 ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸುವಂತೆ ಕೋರಿ ಪ್ರಧಾನ ಮಂತ್ರಿ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಇದರಲ್ಲಿ ಕ್ರೀಡಾಂಗಣದ ಶಿಲಾನ್ಯಾಸವನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಮುಂದುವರೆದ ಮುಂಬೈ ಇಂಡಿಯನ್ಸ್ ಗೆಲುವಿನ ಓಟ: ಗುಜರಾತ್ ವಿರುದ್ಧ 55 ರನ್ ಜಯ