ಮುಂಬೈ(ಮಹಾರಾಷ್ಟ್ರ):ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರ ಕೊರನಾ ಓಮಿಕ್ರೋನ್ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಅಲರ್ಟ್ ಆಗಿದೆ.
ಇದೀಗ ಮುಂದಿನ ತಿಂಗಳಿಂದ ಆರಂಭಗೊಳ್ಳಬೇಕಾಗಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಪುರುಷರ ಕ್ರಿಕೆಟ್ ಸರಣಿ ಅನುಮಾನ ಮೂಡಿಸಿದೆ. ಇದೇ ವಿಚಾರವಾಗಿ ಭಾರತೀಯ ಕ್ರಿಕೆಟ್ ಮಂಡಳಿ ಖಜಾಂಚಿ ಮಾತನಾಡಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿ ಪ್ರತಿದಿನ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಅಲ್ಲಿನ ಪರಿಸ್ಥಿತಿ ಕುರಿತಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ.
ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿ ನಡೆಸಲು ನಾವು ಆದ್ಯತೆ ನೀಡಿದ್ದೇವೆ. ಆದರೆ, ಪ್ಲೇಯರ್ಸ್ ಸುರಕ್ಷತೆ ಮುಖ್ಯವಾಗಿದೆ ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಏನು ಹೇಳಲು ಸಾಧ್ಯವಿಲ್ಲ. ಆದರೆ, ಪರಿಸ್ಥಿತಿಯನ್ನ ಹತ್ತಿರದಿಂದ ಗಮನಿಸಲಾಗುತ್ತಿದೆ. ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಎರಡು ಮಂಡಳಿಗೂ ಕ್ರಿಕೆಟಿಗರ ಆರೋಗ್ಯ ಮುಖ್ಯವಾಗಿದೆ. ಅದನ್ನ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಪಂದ್ಯ ಆಯೋಜನೆಗೊಂಡರೆ ವೀಕ್ಷಕರಿಗೆ ಅವಕಾಶ ನೀಡುವುದರ ಬಗ್ಗೆಯೂ ಸಹ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿರಿ:Aircel-Maxis case : ಮಾಜಿ ಸಚಿವ ಚಿದಂಬರಂ ಹಾಗೂ ಮಗ ಕಾರ್ತಿಗೆ ಸಮನ್ಸ್
ಇದೇ ವಿಚಾರವಾಗಿ ಮಾತನಾಡಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರ ಕಾಣಿಸಿಕೊಂಡಿರುವ ಕಾರಣ ದಕ್ಷಿಣ ಆಫ್ರಿಕಾಗೆ ತಂಡ ಕಳುಹಿಸುವ ಬಗ್ಗೆ ಬಿಸಿಸಿಐ ಮಾತುಕತೆ ನಡೆಸಲಿದೆ ಎಂದಿದ್ದಾರೆ.
ಡಿಸೆಂಬರ್ 8ರಂದು ಟೀಂ ಇಂಡಿಯಾ ಹರಿಣಗಳ ನಾಡಿಗೆ ಪ್ರವಾಸ ಕೈಗೊಳ್ಳಬೇಕಾಗಿದೆ. ಈ ವೇಳೆ ಭಾರತ ತಂಡ ಮೂರು ಟೆಸ್ಟ್ ಪಂದ್ಯ, ಮೂರು ಏಕದಿನ ಹಾಗೂ ನಾಲ್ಕು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಬೇಕಾಗಿದೆ.
ಡಿಸೆಂಬರ್ 17ರಿಂದ ದಕ್ಷಿಣ ಆಫ್ರಿಕಾದ ಜೊಹಾನ್ಸ್ಬರ್ಗ್ನಲ್ಲಿ ಮೊದಲ ಟೆಸ್ಟ್ ಪಂದ್ಯ ಆಯೋಜನೆಗೊಂಡಿದೆ. ಇದಾದ ಬಳಿಕ ಸೆಂಚುರಿಯನ್ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಹಾಗೂ ಕೇಪ್ಟೌನ್ನಲ್ಲಿ ಕೊನೆ ಟೆಸ್ಟ್ ಪಂದ್ಯ ಜನವರಿ 3ರಿಂದ ಆರಂಭಗೊಳ್ಳಬೇಕಾಗಿದೆ. ಇದಾದ ಬಳಿಕ ಕೇಪ್ಟೌನ್ನಲ್ಲಿ ಏಕದಿನ ಹಾಗೂ ಟಿ20 ಪಂದ್ಯಗಳು ನಡೆಯಬೇಕಿವೆ.