ಮುಂಬೈ: ಬಯೋ ಬಬಲ್ನಲ್ಲಿದ್ದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಬಿಸಿಸಿಐ 2021ರ ಐಪಿಎಲ್ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಇದೀಗ ಆಟಗಾರರು ಮತ್ತು ಎಲ್ಲಾ ಸಿಬ್ಬಂದಿಯನ್ನು ಮನೆಗೆ ತಲುಪಿಸುವ ಜವಾಬ್ದಾರಿ ತಮ್ಮದೇ ಎಂದು ಬಿಸಿಸಿಐ ತಿಳಿಸಿದೆ.
ಸೋಮವಾರ ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಹಾಗೂ ಸಿಎಸ್ಕೆ ತಂಡದ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಅವರು ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದರು. ಮಂಗಳವಾರ ಸನ್ರೈಸರ್ಸ್ ಹೈದರಾಬಾದ್ ತಂಡದ ವೃದ್ಧಿಮಾನ್ ಸಹಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾಗೆ ಕೊರೊನಾ ದೃಢಪಟ್ಟಿದೆ. ಇದರ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ.
ಬಿಸಿಸಿಐ ಆಟಗಾರರು, ಸಹಾಯಕ ಸಿಬ್ಬಂದಿ ಅಥವಾ ಇನ್ಯಾವುದೇ ಟೂರ್ನಿಯ ಭಾಗವಾಗಿರುವವರ ಸುರಕ್ಷಿತೆಯ ದೃಷ್ಟಿಯಲ್ಲಿ ರಾಜಿಯಾಗಲು ಬಯಸುವುದಿಲ್ಲ. ಹಾಗಾಗಿ ಸ್ಟೇಕ್ ಹೋಲ್ಡರ್ಸ್ ಮತ್ತು ಎಲ್ಲರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಟು ಈ ಆವೃತ್ತಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದೇವೆ ಎಂದು ಬಿಸಿಸಿಐ ಪ್ರಕಟಣೆ ಹೊರಡಿಸಿತ್ತು.
ಟೂರ್ನಿಯ ಭಾಗವಾಗಿರುವ ಎಲ್ಲಾ ಆಟಗಾರರನ್ನು ಸುರಕ್ಷಿತ ಮಾರ್ಗದಲ್ಲಿ ಮನೆಗೆ ತಲುಪಿಸುತ್ತೇವೆ ಎಂದು ಬಿಸಿಸಿಐ ತಿಳಿಸಿದೆ.
" ಐಪಿಎಲ್ 2021ರಲ್ಲಿ ಭಾಗವಹಿಸಿರುವ ಎಲ್ಲರನ್ನೂ ಸುರಕ್ಷಿತವಾಗಿ ಮತ್ತು ಸುರಕ್ಷಿತ ಮಾರ್ಗದಲ್ಲಿ ಕಳುಹಿಸಿಕೊಡಲು ವ್ಯವಸ್ಥೆ ಮಾಡಲು ಬಿಸಿಸಿಐ ತನ್ನ ಸಾಧ್ಯವಾಗುವುದನ್ನೆಲ್ಲಾ ಮಾಡಲಿದೆ. ಎಲ್ಲಾ ಆರೋಗ್ಯ ಕಾರ್ಯಕರ್ತರು, ರಾಜ್ಯ ಕ್ರಿಕೆಟ್ ಮಂಡಳಿಗಳು, ಆಟಗಾರರು, ಸಹಾಯಕ ಸಿಬ್ಬಂದಿ, ಫ್ರಾಂಚೈಸಿಗಳು, ಪ್ರಾಯೋಜಕರು, ಪಾಲುದಾರರು ಮತ್ತು ಈ ಅತ್ಯಂತ ಕಷ್ಟದ ಸಮಯದಲ್ಲೂ ಐಪಿಎಲ್ 2021 ಸಂಘಟಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ ಎಲ್ಲ ಸೇವಾ ಪೂರೈಕೆದಾರರಿಗೆ ಬಿಸಿಸಿಐ ಧನ್ಯವಾದ ತಿಳಿಸುತ್ತದೆ" ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.